ತಿಪ್ಪೇನಹಳ್ಳಿಯ ಮೇಷ್ಟ್ರು
ಕೆಲವು ದಿನಗಳ ತರುವಾಯ ತಿಪ್ಪೂರಿನ ಫ್ರೈಮರಿ ಸ್ಕೂಲಿನ ವಿಚಾರದಲ್ಲಿ ಬದಲಾವಣೆಗಳಾದುವು. ಕಟ್ಟಡವನ್ನು ರಿಪೇರಿ ಮಾಡಿಕೊಟ್ಟಿಲ್ಲದ ಕಾರಣದಿಂದಲೂ, ಅಲ್ಲಿ ಪ್ಲೇಗಿನ ಇಲಿ ಬಿದ್ದು ಸರಿಯಾಗಿ ಡಿಸಿನ್ ಫೆಕ್ ಷನ್ ಮಾಡಲಾಗುವುದಿಲ್ಲವೆಂದು ವೈಸ್ ಪ್ರಸಿಡೆಂಟರು ಬರೆದಿರುವ ಕಾರಣದಿಂದಲೂ ಆ ಕಟ್ಟಡವನ್ನು ಖಾಲಿ ಮಾಡಲಾಗಿದೆ ಎಂದು ಕಲ್ಲೆ ಗೌಡರಿಗೆ ನೋಟೀಸನ್ನು ರಂಗಣ್ಣ ಕೊಟ್ಟು ಬಿಟ್ಟನು. ಮರದ ಸಾಮಾನುಗಳು, ಮೊದಲಾದುವನ್ನೆಲ್ಲ ಡಾಕ್ಟರ ಅಭಿಪ್ರಾಯವನ್ನನುಸರಿಸಿ ಚೊಕ್ಕಟ ಮಾಡಬೇಕೆಂದೂ ಅನಂತರ ಅವುಗಳನ್ನು ಮಿಡಲ್ ಸ್ಕೂಲಿನ ಕಟ್ಟಡಕ್ಕೆ ಸಾಗಿಸಿ ಪಾಠಶಾಲೆಯನ್ನು ಒಪ್ಪೊತ್ತು ಮಾತ್ರಆ ಕಟ್ಟಡದಲ್ಲಿ ಏಳೂವರೆ ಯಿಂದ ಹನ್ನೊಂದರವರೆಗೆ ಮಾಡಬೇಕೆಂದೂ ಆ ಪಾಠಶಾಲೆಯ ಹೆಡ್ ಮಾಸ್ಟರಿಗೆ ಕಾಗದ ಬರೆದನು. ಅದರಂತೆ ಆ ಕಟ್ಟಡ ಖಾಲಿಯಾಗಿ ಫ್ರೈಮರಿ ಸ್ಕೂಲು ಮಿಡಲ್ ಸ್ಕೂಲಿನ ಕಟ್ಟಡದಲ್ಲಿ ಕೆಲಸಮಾಡಲು ಪ್ರಾರಂಭವಾಯಿತು. ತಿಪ್ಪೂರಿನ ಜನರೆಲ್ಲ ಆಶ್ಚರ್ಯ ಪಡುತ್ತ, ‘ಗಂಡು ಇನ್‌ಸ್ಪೆಕ್ಟರು! ಕಲ್ಲೇಗೌಡನಿಗೆ ತಕ್ಕ ಶಾಸ್ತಿ ಮಾಡಿಬಿಟ್ಟರು! ಅವನ ಮಾತಿಗೆ ಹೋಗದೆ ಹಿಂದಿನವರೆಲ್ಲ ಹೆದರಿಕೊಂಡು ಸಾಯುತ್ತಿದ್ದರು. ಈಗ ಇವರು ಧೈರ್‍ಯ ಮಾಡಿ ಕಟ್ಟಡವನ್ನು ಖಾಲಿ ಮಾಡಿಯೇ ಬಿಟ್ಟರಲ್ಲ!’ ಎಂದು ಬೀದಿ ಬೀದಿಗಳಲ್ಲಿ ನಿಂತು ಆಡಿಕೊಳ್ಳತ್ತಿದ್ದರು. ತನ್ನ ಕಟ್ಟಡ ಖಾಲಿಯಾಯಿತೆಂದೂ ಮುಂದೆ ಬಾಡಿಗೆ ಬರುವುದಿಲ್ಲವೆಂದೂ ಕಲ್ಲೇ ಗೌಡನಿಗೆ ತಿಳಿದಾಗ ಆತನಿಗೆ ಉಗ್ರ ಕೋಪ ಬಂದು, ‘ಈ ಇನ್ಸ್‌ಪೆಕ್ಟರ ಹುಟ್ಟಡಗಿಸಿಬಿಡುತ್ತೇನೆ! ನನ್ನನ್ನು ಯಾರು ಎಂದು ತಿಳಿದುಕೊಂಡಿದ್ದಾನೆ ಇವನು! ಡೆಪ್ಯುಟಿ ಕಮೀಷನರ್ ಮತ್ತು ರೆವಿನ್ಯೂ ಕಮಿಷನರುಗಳೇ ನನಗೆ ಹೆದರುತ್ತಿರುವಾಗ ಈ ಚಿಲ್ಲರೆ ಇಸ್ಕೊಲ್ ಇನ್ಸ್‌ಪೆಕ್ಟರು ನನ್ನ ಮೇಲೆ ಕೈ ಮಾಡೋಕ್ಕೆ ಬಂದಿದ್ದಾನೆ! ಆಗಲಿ !’ ಎಂದು ಗರ್‍ಜಿಸಿದನಂತೆ. ಹೀಗೆ ನಿಷ್ಕಾರಣವಾಗಿ ಪ್ರಬಲ ವಿರೋಧವೊಂದು ರಂಗಣ್ಣನಿಗೆ ಗಂಟು
ಬಿತ್ತು.
ಇನ್ನೊಂದು ಕಡೆ ಕರಿಯಪ್ಪನ ಅಣ್ಣನ ಮಗನಿಗೆ ಸ್ಕಾಲರ್ ಷಿಪ್ಪು ನಿಂತು ಹೋಗಿತ್ತಷ್ಟೆ. ಸಾಹೇಬರ ಅಪ್ಪಣೆ ಪ್ರಕಾರ ಹಾಗೆ ನಿಂತುಹೋಗಿದ್ದ ಸ್ಕಾಲರ್ ಷಿಪ್ಪನ್ನು ಈಚೆಗೆ ಬೇರೆ ಹುಡುಗನಿಗೆ ಕೊಟ್ಟಿದ್ದಾಯಿತು. ಸ್ಕಾಲರ್ ಷಿಪ್ಪು ನಿಂತು ಹೋಗಿದ್ದ ಲಾಗಾಯಿತು ಕರಿಯಪ್ಪನಿಗೆ ಇನ್ ಸ್ಪೆಕ್ಟರ ಮೇಲೆ ದ್ವೇಷವಿದ್ದೇ ಇತ್ತು. ಆದರೆ ನಿಲ್ಲಿಸಿದ್ದ ಸ್ಕಾಲರ್‍ಷಿಪ್ಪನ್ನು ತನಗೆ ಹೆದರಿಕೊಂಡು ಪುನಃ ತನ್ನ ಅಣ್ಣನ ಮಗನಿಗೇನೇ ಕೊಟ್ಟು ಬಿಡ ಬಹುದು ಎಂಬ ಒಂದು ನಿರೀಕ್ಷಣೆ ಇತ್ತು. ಆದರೆ ಈಗ ಆ ಸ್ಕಾಲರ್ ಷಿಪ್ಪು ಅರ್‍ಜಿದಾರನ ಮಗನಿಗೆ ಸಂದಾಯವಾಯಿತು ; ತನ್ನ ಅಣ್ಣನ ಮಗನಿಗೆ ತಪ್ಪೇ ಹೋಯಿತು. ಈ ಕಾರಣದಿಂದ ಕರಿಯಪ್ಪನಿಗೂ ರಂಗಣ್ಣನ ಮೇಲೆ ಬಲವಾಗಿ ದ್ವೇಷ ಬೆಳೆಯಿತು. ಆದರೆ ಆತ ಏನೊಂದು ಗರ್‍ಜನೆಗಳನ್ನೂ ಮಾಡದೆ ದಿವಾನರಿಗೆ ಕಾಗದವನ್ನು ಬರೆದುಬಿಟ್ಟನಂತೆ!
ಕೆಲವು ದಿನಗಳಾದಮೇಲೆ ಸಾಹೇಬರ ತನಿಖೆಯ ಮತ್ತು ಭೇಟಿಗಳ ಟಿಪ್ಪಣಿಗಳು ಬಂದುವು. ಕಚೇರಿಯ ವಿಚಾರದಲ್ಲೂ ರಂಗಣ್ಣನ ಕೆಲಸದ ವಿಚಾರದಲ್ಲೂ ಹೆಚ್ಚು ಆಕ್ಷೇಪಣೆ ಇರಲಿಲ್ಲ; ಕೆಲವು ಮೆಚ್ಚಿಕೆಯ ಮಾತುಗಳೇ ಇದ್ದುವು. ಆದರೆ ಪಾಠಶಾಲೆಗಳ ವಿಚಾರದಲ್ಲಿ ಸಾಹೇಬರು ಬಹಳ ಕಠಿನ ಚಿತ್ತರಾಗಿಯೂ ಬಹಳ ದುಡುಕಿಯೂ ಆಜ್ಞೆಗಳನ್ನು ಮಾಡಿದ್ದಾರೆಂದು ರಂಗಣ್ಣನು ಬಹಳ ವ್ಯಥೆಪಟ್ಟನು. ದಾಖಲೆಯಲ್ಲಿಲ್ಲದ ಮಕ್ಕಳನ್ನು ಪಾಠಶಾಲೆಯಲ್ಲಿ ಕೂಡಿಸಿಕೊಂಡಿದ್ದ ತಿಪ್ಪೇನಹಳ್ಳಿಯ ಮೇಷ್ಟರಿಗೆ ಮೂರು ರುಪಾಯಿ, ಮತ್ತು ‘ಶತ್ರು’ ಎಂಬ ಪದವನ್ನು ‘ಶತೃ’ ಎಂದು ಬರೆದಿದ್ದ ಸೀತಮ್ಮನಿಗೆ ಮೂರು ರುಪಾಯಿ ಜುಲ್ಮಾನೆಗಳನ್ನು ಹಾಕಿದ್ದರು! ಸುಂಡೇನಹಳ್ಳಿಯ ಮೇಷ್ಟ್ರು ಹಳ್ಳಿಯಲ್ಲಿ ವಾಸಮಾಡಬೇಕೆಂದೂ ಹಳ್ಳಿಯಲ್ಲಿ ಮನೆಗಳಿರುವುದು ಸ್ಪಷ್ಟವಾಗಿರುವುದೆಂದೂ ತಿಳಿಸಿ, ಆ ಬಗ್ಗೆ ಇನ್ಸ್‌ಪೆಕ್ಟರು ಹಿಂದೆ ಕಳಿಸಿದ್ದ ದಾಖಲೆಗಳು ಕಚೇರಿಯಲ್ಲಿ ದೊರೆಯದ್ದರಿಂದ ದುಯ್ಯಂ ಪ್ರತಿಗಳನ್ನು ಮಾಡಿ ಕಳಿಸಬೇಕೆಂದೂ ಆಜ್ಞೆ ಮಾಡಿದ್ದರು. ಮೇಲಿನವರ ಅಪ್ಪಣೆಗಳನ್ನು ಪಾಲಿಸದಿದ್ದರೆ ಮಹಾಪರಾಧವಾಗುವುದರಿಂದ ಆಯಾ ಮೇಷ್ಟರುಗಳಿಗೆ ಸಾಹೇಬರ ಟಿಪ್ಪಣಿಗಳನ್ನು ಕಳಿಸಿದ್ದಾಯಿತು. ಸ್ವಲ್ಪ ತಪ್ಪಿಗೆಲ್ಲ ಹೀಗೆ ಬಡಮೇಷ್ಟರುಗಳ ಹೊಟ್ಟೆಯಮೇಲೆ ಹೊಡೆದರೆ ಹೇಗೆ? ಎಂದು ಚಿಂತಾಕ್ರಾಂತನಾಗಿ ರಂಗಣ್ಣನು ಎರಡು ದಿನ ಪೇಚಾಡಿದನು.
ಕೆಲವು ದಿನಗಳ ತರುವಾಯ ರಂಗಣ್ಣ ಸ್ಕೂಲುಗಳ ಭೇಟಿಗೆಂದು ಹೊರಟನು. ತಿಪ್ಪೇನಹಳ್ಳಿಯ ಮೇಷ್ಟ್ರು ನಿಜವಾಗಿಯೂ ರೂಲ್ಸಿಗೆ ವಿರುದ್ಧವಾಗಿ ನಡೆಯುತ್ತಿದಾನೆಯೆ? ಇನ್ನೂ ಇತರರು ಯಾರು ಹಾಗೆ ದಾಖಲೆಯಿಲ್ಲದ ಮಕ್ಕಳನ್ನು ಸೇರಿಸಿಕೊಂಡಿದ್ದಾರೆ? ನೋಡೋಣ ಎಂದು ಆಲೋಚಿಸುತ್ತ ತಿಪ್ಪೇನಹಳ್ಳಿಗೆ ಸುಮಾರು ಒಂಬತ್ತು ಗಂಟೆಯ ಹೊತ್ತಿಗೆ ಹೋದನು. ರಂಗಣ್ಣ ಬೈಸ್ಕಲ್ಲಿಂದ ಇಳಿದು, ಅದನ್ನು ಗೋಡೆಗೆ ಒರಗಿಸಿದನು. ಮೇಷ್ಟ್ರು ವೆಂಕಣ್ಣ ಭಯದಿಂದ ನಡುಗುತ್ತ ಹೊರಕ್ಕೆ ಬಂದು ನಮಸ್ಕಾರ ಮಾಡಿದನು. ಪಾಠಶಾಲೆಯ ಗೋಡೆಗೆ ನೋಟೀಸ್ ಬೋರ್ಡ್ ಒಂದನ್ನು ತಗುಲು ಹಾಕಿತ್ತು. ನೋಟೀಸು ಬೋರ್ಡಿನ ಮೇಲೆ, (೧) ಮಕ್ಕಳು ಸರಿಯಾದ ಹೊತ್ತಿಗೆ ಬರಬೇಕು. (೨) ಪಾಠ ಕಾಲದಲ್ಲಿ ಗ್ರಾಮಸ್ಥರು ಒಳಕ್ಕೆ ಬರಕೂಡದು. (೩) ದಾಖಲೆಯಿಲ್ಲದ ಮಕ್ಕಳನ್ನು ಒಳಕ್ಕೆ ಸೇರಿಸುವುದಿಲ್ಲ. (೪) ಸ್ಕೂಲಿನ ಒಪ್ಪಾರದಲ್ಲಿ ಗ್ರಾಮಸ್ಥರು ಯಾರೂ ಕುಳಿತು ಗಲಾಟೆ ಮಾಡಕೂಡದು ಎಂದು ದಪ್ಪಕ್ಷರಗಳಲ್ಲಿ ಬರೆದಿತ್ತು. ರಂಗಣ್ಣ ಅವುಗಳನ್ನೆಲ್ಲ ನೋಡಿ ತೃಪ್ತಿಪಟ್ಟು ಕೊಂಡನು. ‘ಮೇಷ್ಟ್ರೆ! ಹಿಂದೆ ಸಾಹೇಬರು ಬಂದಾಗ ಈ ನೋಟೀಸ್ ಬೋರ್ಡನ್ನು ಇಲ್ಲಿ ಹಾಕಿರಲಿಲ್ಲವೇ?’ ಎಂದು ಕೇಳಿದನು.
‘ಹಾಕಿದ್ದೆ ಸ್ವಾಮೀ! ಎಲ್ಲವನ್ನೂ ಹಾಕಿದ್ದೆ! ಏನು ಹಾಕಿದ್ದರೆ ಏನು? ನನ್ನ ಗ್ರಹಚಾರ! ತಮ್ಮ ಜುಲ್ಮಾನೆ ಆರ್‍ಡರು ನಿನ್ನೆ ನನ್ನ ಕೈಗೆ ತಲುಪಿತು ಸ್ವಾಮಿ! ಅದನ್ನು ನೋಡಿ ಎದೆಯೊಡೆದು ಹೋಯಿತು. ಅನ್ನ ನೀರು ಮುಟ್ಟಿದ್ದರೆ ಕೇಳಿ! ಆ ಸೂರ್‍ಯ ನಾರಾಯಣನ ಆಣೆ!
‘ಹೌದು ಮೇಷ್ಟ್ರೇ! ತಪ್ಪು ಮಾಡುತ್ತೀರಿ, ಜುಲ್ಮಾನೆ ಬೀಳುತ್ತದೆ. ನೋಟೀಸು ಹಾಕಿದ್ದೀರಿ, ದಾಖಲೆಯಿಲ್ಲದ ಮಕ್ಕಳನ್ನು ಒಳಕ್ಕೆ ಸೇರಿಸುತ್ತೀರಿ! ಸಾಹೇಬರು ತಾನೆ ಏನು ಮಾಡುತ್ತಾರೆ? ನಾನು ತಾನೇ ಏನು ಮಾಡಬಲ್ಲೆ?’
‘ಹಾಗೆಲ್ಲ ನಾನು ಮಕ್ಕಳನ್ನು ಸೇರಿಸುತ್ತಿಲ್ಲ ಸ್ವಾಮಿ! ಪರಾಂಬರಿಸ ಬೇಕು. ಹಳ್ಳಿಯವರನ್ನು ಕೇಳಿ ನೋಡಿ ಸ್ವಾಮಿ! ಆ ಜನರ ನಿಷ್ಟುರವನ್ನೆಲ್ಲ ತಲೆಗೆ ಕಟ್ಟಿ ಕೊಂಡು ರೂಲ್ಸು ಪ್ರಕಾರ ಕೆಲಸ ಮಾಡುತ್ತಿದೇನೆ. ಮುಖ್ಯ, ನನಗೆ ಗ್ರಹಚಾರ ಕಾಲ! ಮೇಲಿಂದ ಮೇಲೆ ಕಷ್ಟಗಳೂ ದುಃಖಗಳೂ ತಲೆಗೆ ಕಟ್ಟುತ್ತಿವೆ – ಎಂದು ಅಳುತ್ತಾ ಮೇಷ್ಟ್ರು ಪಂಚೆಯ ಸೆರಗಿನಿಂದ ಕಣ್ಣೀರನ್ನೊರಸಿಕೊಳ್ಳುತ್ತಿದ್ದನು. ಮೇಷ್ಟ್ರು ಬೂಟಾಟಿಕೆ ಮಾಡುತಿದ್ದಾನೋ ಏನೋ! ಎಂದು ರಂಗಣ್ಣನಿಗೆ ಸಂಶಯವುಂಟಾಯಿತು. ಒಳಕ್ಕೆ ಹೋಗಿ ಕುರ್‍ಚಿಯ ಮೇಲೆ ಕುಳಿತುಕೊಂಡನು. ಹಾಜರಿ ರಿಜಿಸ್ಟರನ್ನು ಕೈಗೆ ತೆಗೆದುಕೊಂಡು ಹಾಜರಿಗಳನ್ನು ಎಣಿಸಿದನು; ಹಾಜರಿದ್ದ ಮಕ್ಕಳ ಸಂಖ್ಯೆಯನ್ನೂ ಎಣಿಸಿದನು; ತಾಳೆಯಾಗಲಿಲ್ಲ! ಇಬ್ಬರು ಮಕ್ಕಳು ಹೆಚ್ಚಾಗಿದ್ದಂತೆ ಕಂಡಿತು. ಪುನಃ ಹಾಜರಿ ಎಣಿಸಿ, ಮಕ್ಕಳನ್ನು ನಿಧಾನವಾಗಿ ನೋಡುತ್ತ ಎಣಿಸತೊಡಗಿದನು. ಇಬ್ಬರು ಹೆಚ್ಚಾಗಿಯೇ ಇದ್ದರು! ಬಳಿಕ ಒಬ್ಬೊಬ್ಬರ ಹೆಸರನ್ನೂ ಕರೆದು ಅವರು ಹಾಜರಿ ಹೇಳುತ್ತಲೂ ಆ ಮಕ್ಕಳನ್ನು ಹೊರಕ್ಕೆ ಆಟಕ್ಕೆ ಬಿಡುತ್ತಾ ಬಂದನು. ಕಡೆಗೆ ಹಾಜರಿ ಮುಗಿಯಿತು. ಒಂದು ಹುಡುಗಿ ಮತ್ತು ಒಬ್ಬ ಹುಡುಗ ಉಳಿದುಕೊಂಡರು! ರಂಗಣ್ಣನಿಗೆ ಸ್ವಲ್ಪ ಕೋಪ ಬಂತು.
‘ಮೇಷ್ಟೆ! ಇದೇಕೆ ಸುಳ್ಳು ಹೇಳುತ್ತೀರಿ? ಈ ಇಬ್ಬರು ಮಕ್ಕಳು ದಾಖಲೆಯಲ್ಲಿಲ್ಲವಲ್ಲ! ಅಲ್ಲದೆ ವಯಸ್ಸು ಕೂಡ ಚಿಕ್ಕದು. ಇವರನ್ನೇಕೆ ಕೂಡಿಸಿಕೊಂಡಿದ್ದೀರಿ
‘ಸ್ವಾಮಿ! ಅವು ನನ್ನ ಮಕ್ಕಳು!’ ಎಂದು ಹೇಳುತ್ತಾ ಮೇಷ್ಟ್ರು ಗಟ್ಟಿಯಾಗಿ ಅಳುವುದಕ್ಕೆ ತೊಡಗಿದನು.
‘ನಿಮ್ಮ ಮಕ್ಕಳಿರಬಹುದು. ಮನೆಯಲ್ಲಿ ಬಿಡದೆ ಇಲ್ಲೇಕೆ ತಂದು ಕೂಡಿಸಿಕೊಂಡಿದ್ದೀರಿ ರೂಲ್ಸಿಗೆ ವಿರುದ್ದ ವಲ್ಲವೇ?’
‘ಇನ್ನೇನು ಮಾಡಲಿ ಸ್ವಾಮಿ! ಆ ಮಕ್ಕಳು ತಬ್ಬಲಿಯಾಗಿ ಹೋದುವಲ್ಲ! ತಾಯಿಯಿಲ್ಲವೇ! ಆವನ್ನು ಎಲ್ಲಿ ಬಿಟ್ಟು ಬರಲಿ? ಎರಡು ತಿಂಗಳ ಹಿಂದೆ ಈ ಹಳ್ಳಿಯಲ್ಲೇ ನನ್ನ ಹೆಂಡತಿ ಸತ್ತು ಹೋದಳು. ಈ ಪಾಪಿಷ್ಠ ಕೈಯಿಂದಲೇ ಚಿತಿ ಹಚ್ಚಿ ಭಸ್ಮಮಾಡಿ ಬಂದೆನಲ್ಲ! ಮನೆಯಲ್ಲಿ ನೋಡಿಕೊಳ್ಳುವವರು ಯಾರೂ ಗತಿಯಿಲ್ಲ! ಎಳೆಯ ಮಕ್ಕಳು! ಎಲ್ಲಿ ಬಿಟ್ಟು ಬರಲಿ ಸ್ವಾಮಿ?’
ರಂಗಣ್ಣನ ಮುಖ ಜೋತುಬಿತ್ತು. ಕಣ್ಣುಗಳಲ್ಲಿ ನೀರು ತುಂಬಿ ಕೊಂಡುವು. ಮಾತು ಹೊರಡಲಿಲ್ಲ. ಒಂದು ಕ್ಷಣದಲ್ಲಿ ತನ್ನ ಸಂಸಾರದ – ಹೆಂಡತಿ ಮತ್ತು ಮಕ್ಕಳ – ದೃಶ್ಯ ಕಣ್ಣಿಗೆ ಕಟ್ಟಿತು. ತಾಯಿಯೆಂಬುವ ವಸ್ತು ವಿಲ್ಲದಿದ್ದರೆ ಸಣ್ಣ ಮಕ್ಕಳ ಗತಿಯೇನು ! ತನ್ನ ಗೃಹಲಕ್ಷ್ಮಿ ಇಲ್ಲದಿದ್ದರೆ ತನ್ನ ಮಕ್ಕಳ ಗತಿಯೇನು! ದೇವರೇ! ಸಾಹೇಬರು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲ! ಈ ಜುಲ್ಮಾನೆಯ ಪಾಪ ಅವರನ್ನು ಹೊಡೆಯದೇ ಬಿಡದು!’ ಎಂದುಕೊಂಡನು.
ಮೇಷ್ಟ್ರೆ! ಆ ದಿನ ನೀವು- ಇವರು ನನ್ನ ಮಕ್ಕಳು, ತಬ್ಬಲಿಗಳು ಎಂದು ಸಾಹೇಬರಿಗೆ ಏಕೆ ತಿಳಿಸಲಿಲ್ಲ?
ಸ್ವಾಮಿ! ಇದ್ದಕ್ಕಿದ್ದ ಹಾಗೆ ರಸ್ತೆಯಲ್ಲಿ ಮೋಟಾರು ಬಂದು ನಿಂತಿತು. ಸರಸರನೆ ಪರಂಗಿ ಟೋಪಿಯವರೊಬ್ಬರು ಒಳಕ್ಕೆ ಬಂದು ಬಿಟ್ಟರು! ಕುರ್‍ಚಿಯ ಮೇಲೆ ಕೂಡ ಕುಳಿತುಕೊಳ್ಳಲಿಲ್ಲ. ಅವರು ಸಾಹೇಬರೆಂಬುದೇ ನನಗೆ ತಿಳಿಯಲಿಲ್ಲ ! ಹಾಜರಿ ಎಷ್ಟು ? ಎಂದು ಕೇಳಿದರು. ಮುವ್ವತ್ತು ನಾಲ್ಕು ಸ್ವಾಮಿ-ಎಂದು ಹೇಳಿದೆ. ಹಾಗೆಯೇ ಹುಡುಗರನ್ನು ಎಣಿಸಿ ಮುವ್ವತ್ತಾರು ಮಕ್ಕಳಿದ್ದಾರೆ; ಹೆಚ್ಚಿಗೆ ಇರುವವರನ್ನು ಹೊರಕ್ಕೆ ಕಳಿಸಿ ಎಂದು ಕೋಪದಿಂದ ಹೇಳಿದರು. ನಾನು ನನ್ನ ಮಕ್ಕಳಿಗೆ- ಹೊರಕ್ಕೆ ಹೋಗಿ ಎಂದು ಹೇಳಿದೆ ಸ್ವಾಮಿ! ಸಾಹೇಬರನ್ನು ನೋಡಿ ಮೊದಲೇ ಭಯಪಟ್ಟಿದ್ದುವು ಮಕ್ಕಳು! ಹೊರಕ್ಕೆ ಹೋಗುವ ಬದಲು ನನ್ನ ಹತ್ತಿರ ಬಂದು ನಿಂತುಕೊಂಡುವು! ತಾಯಿ ಕೈ ಬಿಟ್ಟು ಹೋದ ಮಕ್ಕಳು ಸ್ವಾಮಿ! ತಂದೆಯನ್ನು ಅಂಟಿಕೊಂಡಿರದೆ ಹೇಗೆ ಹೋಗುತ್ತವೆ? ಹೇಳಿ, ಮಕ್ಕಳನೆಲ್ಲ ಆಟಕ್ಕೆ ಬಿಟ್ಟಿದ್ದರೆ ಅವರೂ ಬುಡಬುಡನೆ ಓಡಿಹೋಗುತ್ತಿದ್ದರು! ಅಷ್ಟರಲ್ಲೇ ಸಾಹೇಬರು ಗಿರಕ್ಕನೆ ತಿರುಗಿಕೊಂಡು ಹೊರಟುಬಿಟ್ಟರು. ನಾನು ಸ್ವಾಮಿ! ಇವು ನನ್ನ ಮಕ್ಕಳು! ತಬ್ಬಲಿಗಳು!-ಎಂದು ಹೇಳುತ್ತಾ ಹಿಂದೆ ಹೋದೆ. ಅವರು ಏನನ್ನೂ ಕಿವಿಯ ಮೇಲೆ ಹಾಕಿಕೊಳ್ಳದೆ ಸ್ಕೂಲು ಬಿಟ್ಟು ಬರಬೇಡಿ, ಹೋಗಿ, ಪಾಠ ಮಾಡಿ ಎಂದು ಗದರಿಸಿ ಮೋಟಾರಿನಲ್ಲಿ ಹೊರಟೇ ಹೋದರು ಸ್ವಾಮಿ! ನಾನೇನು ಮಾಡಲಿ? ನನ್ನ ಹಣೆಯ ಬರೆಹ ! ಹೆಂಡತಿ ಸತ್ತದ್ದಕ್ಕೆ ಅಳಲೇ ? ಮಕ್ಕಳು ತಬ್ಬಲಿಗಳಾಗಿ ಅನ್ನ ನೀರು ಕಾಣದೆ ಒದ್ದಾಡುವುದಕ್ಕೆ ಅಳಲೇ? ಸಾಹೇಬರು ಕೋಪ ಮಾಡಿಕೊಂಡು ಜುಲ್ಮಾನೆ ಹಾಕಿದ್ದಕ್ಕೆ ಆಳಲೇ? ನಾನು ಯಾವ ದೇವರ ಹತ್ತಿರ ಹೋಗಿ ನನ್ನ ಮೊರೆಯನ್ನು ಹೇಳಿಕೊಳ್ಳಲಿ?’
ಮೇಷ್ಟ್ರೆ! ಅಳಬೇಡಿ. ಸಮಾಧಾನಮಾಡಿಕೊಳ್ಳಿ; ಧೈರ್‍ಯ ತಂದುಕೊಳ್ಳಿ, ನನ್ನ ಕೈಗೊಂದು ಅರ್ಜಿಯನ್ನು ಕೊಡಿ, ವಿವರಗಳನ್ನೆಲ್ಲ ತಿಳಿಸಿ. ದಯವಿಟ್ಟು ಜುಲ್ಮಾನೆಯನ್ನು ವಜಾ ಮಾಡಿಸಬೇಕು ಎಂದು ಬರೆಯಿರಿ. ನಾನು ಶಿಫಾರಸು ಮಾಡುತ್ತೇನೆ. ನಿಮ್ಮ ಅದೃಷ್ಟ ಒಳ್ಳೆಯದಾಗಿದ್ದರೆ ಜುಲ್ಮಾನೆ ವಜಾ ಆಗುತ್ತದೆ.’
ನನ್ನ ಅದೃಷ್ಟ ಕಾಣುತ್ತಿದೆಯಲ್ಲ ಸ್ವಾಮಿ! ಏಳರಾಟ ಶನಿ ಹೊಡೆದು ಅಪ್ಪಳಿಸುತ್ತಿದೆ! ಇಲ್ಲದಿದ್ದರೆ ಹೀಗೆ ನಾನಾ ಭಂಗಪಡುತ್ತಿದ್ದೆನೇ ನಾನು? ನನ್ನ ಹೆಂಡತಿ ಸತ್ತ ದಿನ ನನ್ನ ಗೋಳು ಕೇಳ ಬೇಕೇ? ಆ ಹೆಣ ಸಾಗಿಸುವುದಕ್ಕೆ ಬ್ರಾಹ್ಮಣ ಜನ ಈ ಹಳ್ಳಿಯಲ್ಲಿಲ್ಲ. ಹೆಡ್ ಮೇಷ್ಟ್ರು ವೆಂಕಟಸುಬ್ಬಯ್ಯನವರಿಗೆ ವರ್ತಮಾನ ಕಳಿಸಿಕೊಟ್ಟೆ, ಪುಣ್ಯಾತ್ಮರು ಐವತ್ತು ರುಪಾಯಿ ಗಂಟುಕಟ್ಟಿ ಕೊಂಡು ಜನರನ್ನೂ ಪುರೋಹಿತನನ್ನೂ ಕರೆದುಕೊಂಡು ಇಲ್ಲಿಗೆ ಬಂದು ದಹನ ಕ್ರಿಯೆಗಳನ್ನು ನಡೆಸಿಕೊಟ್ಟರು; ಕರ್‍ಮಾಂತರಗಳಿಗೆ ಹಣ ಕೊಟ್ಟು ಧೈರ್ಯ ಹೇಳಿ ಹೋದರು.
‘ಯಾವ ವೆಂಕಟಸುಬ್ಬಯ್ಯ? ಎಲ್ಲಿಯ ಹೆಡ್ ಮೇಷ್ರ್ಟು? ಇಲ್ಲೇ ಸ್ವಾಮಿ! ಮೂರು ಮೈಲಿ ದೂರದ ಬೊಮ್ಮನಹಳ್ಳಿ ಸ್ಕೂಲಿನ ಹೆಡ್ ಮೇಷ್ಟ್ರು, ವೆಂಕಟಸುಬ್ಬಯ್ಯ! ದೇವರು ಅವರ ಹೊಟ್ಟೆ ತಣ್ಣಗಿಟ್ಟಿರಲಿ ಸ್ವಾಮಿ!’
‘ಏನಾಗಿತ್ತು ನಿಮ್ಮ ಹೆಂಡತಿಗೆ?’
‘ಏನೆಂದು ಹೇಳಲಿ ಸ್ವಾಮಿ? ಏನೋ ಜ್ವರ ಬಂತು. ನಾಲ್ಕು ದಿನ ಜೋರಾಗಿ ಹೊಡೆಯಿತು. ಇದ್ದಕ್ಕಿದ್ದ ಹಾಗೆ ಕಣ್ಮುಚ್ಚಿ ಕೊಂಡುಬಿಟ್ಟಳು! ಊರವರೆಲ್ಲ ಪ್ಲೇಗು ಮಾರಿ ಇರಬಹುದು, ಊರು ಬಿಟ್ಟು ಹೊರಟು ಹೋಗಿ ಎಂದು ಗಲಾಟೆ ಮಾಡಿದರು. ನನ್ನ ಹೆಂಡತಿಯ ಹೆಣ ಸುಟ್ಟು ಹಿಂದಿರುಗಿದರೆ- ಊರೊಳಕ್ಕೆ ಬರಬೇಡಿ ಎಂದು ತಡೆದುಬಿಟ್ಟರು. ವೆಂಕಟಸುಬ್ಬಯ್ಯ ಹೇಳಿನೋಡಿದರು. ಯಾರು ಹೇಳಿದರೂ ಹಳ್ಳಿಯವರು ಕೇಳಲೇ ಇಲ್ಲ! ನನ್ನನ್ನು ಹದಿನೈದು ದಿನ ಊರೊಳಕ್ಕೆ ಸೇರಿಸಲೇ ಇಲ್ಲ! ನನ್ನ ಕಷ್ಟವನ್ನು ಆಲೋಚಿಸಿ ಸ್ವಾಮಿ! ಆ ಮಂಟಪದಲ್ಲಿ ಅಡಿಗೆ ಮಾಡಿಕೊಂಡು, ಈ ಕಟ್ಟಡದೊಳಗೆ ಮಕ್ಕಳನ್ನಿಟ್ಟುಕೊಂಡು ಮಲಗುತಿದ್ದೆ. ಹದಿನೈದು ದಿನ ಕಳೆದಮೇಲೆ ಊರಲ್ಲಿ ಎಲ್ಲಿಯೂ ಇಲಿ ಬೀಳದೆ ಜನ ಕಾಯಿಲೆಯಾಗದೆ ಇದ್ದುದನ್ನು ನೋಡಿ ಜನ ನನ್ನನ್ನು ಊರೊಳಕ್ಕೆ ಬಿಟ್ಟರು?
“ಆದದ್ದು ಆಗಿ ಹೋಯಿತು ಮೇಷ್ಟ್ರೇ! ಇನ್ನೂ ನಿಮಗೆ ಪೂರ್ವ ವಯಸ್ಸು. ಎರಡನೆಯ ಮದುವೆ ಮಾಡಿಕೊಳ್ಳಿ. ಈ ದುಃಖ ಮರೆಯುತ್ತೆ ಮಕ್ಕಳಿಗೂ ದಿಕ್ಕಾಗುತ್ತೆ.’
‘ರಾಮ ರಾಮ! ಇನ್ನು ಆ ಯೋಚನೆಯೇ ಇಲ್ಲ ಸ್ವಾಮಿ! ಆಕೆಗೆ ನಾನು ವಂಚನೆ ಮಾಡೋದಿಲ್ಲ! ನನ್ನ ಮಕ್ಕಳಿಗೆ ನಾನು ಮೋಸ ಮಾಡೋದಿಲ್ಲ!’
‘ಇದೇನು ಹೀಗೆ ಹೇಳುತ್ತೀರಿ ಮೇಷ್ಟ್ರೆ? ಎರಡನೆಯ ಮದುವೆ ಮಾಡಿಕೊಂಡರೆ ಮೊದಲನೆಯ ಹೆಂಡತಿಗೆ ವಂಚನೆ ಮಾಡಿದ ಹಾಗಾಗುತ್ತದೆಯೆ? ಮಕ್ಕಳಿಗೆ ಏನು ಮೋಸವಾಗುತ್ತದೆ? ದಿಕ್ಕಾಗುವುದಿಲ್ಲವೇ?’
ಸ್ವಾಮಿ! ಇತರರ ಮಾತನ್ನು ನಾನೇತಕ್ಕೆ ಆಡಲಿ ? ನನ್ನ ಮಾತು ಹೇಳುತ್ತೇನೆ. ನಾನು ಸಂಸಾರದ ಸುಖ ನೋಡಿದ್ದಾಯಿತು ಸ್ವಾಮಿ! ವಯಿನವಾದ ಹೆಂಡತಿಯಿದ್ದರೆ ಬಡತನದ ದುಃಖ ಕಾಣಿಸೋದಿಲ್ಲ! ನನಗೆ ಹದಿನೈದು ರುಪಾಯಿ ಸಂಬಳ, ನಾನು ಬಡವ ಎಂಬ ಚಿಂತಯೇ ನನಗಿರಲಿಲ್ಲ ಸ್ವಾಮಿ! ದೇವರಾಣೆಗೂ ಹೇಳುತ್ತೇನೆ. ಹೇಗೆ ತಾನೆ ಸಂಸಾರವನ್ನು ನಡೆಸುತ್ತಿದ್ದಳೋ ಆಕೆ! ಸೀರೆ ಬೇಕು ಎಂದು ಕೇಳಿದವಳಲ್ಲ, ಒಡವೆ ಬೇಕು ಎಂದು ಕೇಳಿದವಳಲ್ಲ; ಮನೆಯಲ್ಲಿ ಉಪ್ಪಿಲ್ಲ ಅಕ್ಕಿಯಿಲ್ಲ ಎಂದು ಒಂದು ದಿನವಾದರೂ ಹೇಳಿದವಳಲ್ಲ; ಎಂದೂ ಮುಖವನ್ನು ಸಿಡುಕುಮಾಡಿ ಕೊಂಡವಳೇ ಅಲ್ಲ! ಅಂಥ ಹೆಂಡತಿಯೊಡನೆ ಸಂಸಾರಮಾಡಿ, ಅದನ್ನು ಮರೆಯುವುದುಂಟೇ? ಆಕೆಯನ್ನು ಮರೆಯುವುದುಂಟೇ? ಆಕೆಯನ್ನು ಮರೆಸಿ ಬೇರೊಬ್ಬಳನ್ನು ಮದುವೆಯಾಗುವುದುಂಟಿ! ದೃಢಸಂಕಲ್ಪ ಮಾಡಿದ್ದೇನೆ ಸ್ವಾಮಿ! ಒಂದುವೇಳೆ ಮದುವೆಯಾದೆ ಎಂದಿಟ್ಟು ಕೊಳ್ಳಿ. ಈ ಮಕ್ಕಳನ್ನು ಆ ಹೊಸಬಳು ಆದರಿಸುತ್ತಾಳೆಯೇ? ತನ್ನ ಮಕ್ಕಳಿಗೂ ಕಡೆಗೆ ತನ್ನ ಅಕ್ಕ ತಂಗಿಯರ ಮಕ್ಕಳಿಗೂ ಭೇದಮಾಡುವುದು ಸ್ತ್ರೀಯರ ಸ್ವಭಾವ. ತನ್ನ ಮಗನಿಗೆ ಎರಡು ಮಿಳ್ಳೇ ತುಪ್ಪ, ತನ್ನ ತಂಗಿಯ ಮಗನಿಗೆ ಒಂದು ಮಿಳ್ಳೇ ತುಪ್ಪ! ತನ್ನ ಮಗನಿಗೆ ಮೊಸರು, ಅಕ್ಕನ ಮಗನಿಗೆ ಮಜ್ಜಿಗೆ! ತನ್ನ ಮಗನಿಗೆ ವಾರಕ್ಕೊಂದು ಬಾರಿ ಎರೆಯುವುದು, ತಂಗಿಯ ಮಗನಿಗೆ ತಿಂಗಳಿಗೊಮ್ಮೆ ಎರೆಯುವುದು- ಹೀಗೆಲ್ಲ ಲೋಕದಲ್ಲಿ ಮಾಡುತ್ತಾರೆ. ಹೊಸದಾಗಿ ಬರುವವಳಿಗೆ ಇವರು ತಂಗಿಯ ಮಕ್ಕಳೇ? ಅಕ್ಕನ ಮಕ್ಕಳೇ? ಇವರ ಆರೈಕೆ ಹೇಗೆ ? ದೃಢ ಸಂಕಲ್ಪ ಮಾಡಿದ್ದೇನೆ ಸ್ವಾಮಿ! ಮುತ್ತಿನಂತಹ ಮಕ್ಕಳು : ಒಂದು ಗಂಡು ! ಒಂದು ಹೆಣ್ಣು ! ಇವರ ಆರೈಕೆ ನಾನೇ ಮನವಾರೆ ಮಾಡುತ್ತೇನೆ. ಮತ್ತೊಬ್ಬರ ಕೈಗೆ ಈ ಮಕ್ಕಳನ್ನು ಒಪ್ಪಿಸುವುದಿಲ್ಲ.’
‘ನನ್ನಿಂದ ಏನಾದರೂ ಸಹಾಯ ಬೇಕೇ ಮೇಷ್ಟ್ರೆ?’
‘ಏನು ಸಹಾಯ ಕೇಳಲಿ ಸ್ವಾಮಿ? ಸಾಧ್ಯವಾದರೆ ಜುಲ್ಮಾನೆ ವಜಾ ಮಾಡಿಸಿ ನನ್ನ ಮಾನ ಉಳಿಸಿ, ಹೆಂಡತಿ ಸತ್ತಾಗ ಇಷ್ಟು ಸಂಕಟ ಆಗಲಿಲ್ಲ, ಜುಲ್ಮಾನೆಯಿಂದ ಮಾನ ಹೋದ್ದಕ್ಕೆ ಹೆಚ್ಚು ಸಂಕಟವಾಗಿದೆ. ಅಷ್ಟೇ ಸ್ವಾಮಿ! ಎರಡು ದಿನ ಈ ಕಷ್ಟ ಅನುಭವಿಸುತ್ತೇನೆ. ನನ್ನ ಅಕ್ಕ ಒಬ್ಬಳು ವಿಧವೆ ಇದ್ದಾಳೆ. ಕಾಗದ ಬರೆದಿದ್ದೇನೆ. ಆಕೆ ಬಂದರೆ ನನಗೆ ಸಹಾಯವಾಗುತ್ತೆ. ಇನ್ನು ಹದಿನೈದು ದಿನಗಳಲ್ಲಿ ಬರುತ್ತೇನೆಂದು ಜವಾಬು ಬರೆಸಿದ್ದಾಳೆ ಸ್ವಾಮಿ!’
ರಂಗಣ್ಣ ಆ ಮೇಷ್ಟರಿಂದ ಅರ್ಜಿ ಬರೆಯಿಸಿ ಕೊಂಡು ಹೊರಕ್ಕೆ ಬಂದನು. ಮೇಷ್ಟ್ರು ಜೊತೆಯಲ್ಲಿ ಸ್ಪಲ್ಪ ದೂರ ಬಂದು, ‘ಸ್ವಾಮಿ ! ಈ ಹಳ್ಳಿಯಿಂದ ವರ್ಗ ಮಾಡಿಸಿಕೊಡಲು ಸಾಧ್ಯವೆ? ಆ ಮನೆಯಲ್ಲಿ ಮತ್ತೆ ನಾನು ಇರಲಾರೆನಲ್ಲ’ ಎಂದು ಹೇಳಿದನು.
‘ಆಗಲಿ ಮೇಷ್ಟ್ರೆ! ವರ್ಗ ಮಾಡುತ್ತೇನೆ. ಆದರೆ ಆಲೋಚನೆ ಮಾಡಿ, ಇನ್ನೆರಡು ತಿಂಗಳು ಬಿಟ್ಟು ಕೊಂಡು ಈ ದುಃಖ ಮರೆತಮೇಲೆ ಬೇರೆ ಮದುವೆ ಮಾಡಿಕೊಳ್ಳುವುದು ಒಳ್ಳೆಯದು. ಮೊದಲಿನಂತೆಯೇ ಒಳ್ಳೆಯ ಹೆಂಡತಿ ದೊರೆತಾಳು.’
‘ಇಲ್ಲ ಸ್ವಾಮಿ! ದೃಢ ಸಂಕಲ್ಪ ಮಾಡಿದ್ದೇನೆ! ಹಿರಿಯರ ಹೆಸರು ಉಳಿಸುವುದಕ್ಕೆ ಒಬ್ಬ ಮಗನಾಯಿತು ; ಕನ್ಯಾದಾನದ ಪುಣ್ಯಕ್ಕೆ ಒಬ್ಬಳು ಮಗಳಾದಳು. ಮೇಷ್ಟರುಗಳನ್ನು ಬಡತನ ಹಿಡಿದು ಕಿತ್ತು ತಿನ್ನುತ್ತಿರುವಾಗ ಸಾಲ ಮಾಡಿ ಮತ್ತೆ ಮದುವೆ ಮಾಡಿಕೊಂಡು, ಮತ್ತೆ ನಾಲ್ಕಾರು ಮಕ್ಕಳಾಗಿ, ಅಯ್ಯೋ! ಆ ಜಂಜಾಟ ಬೇಡ ! ಬೇಡ ! ಸಂಸಾರ ಸುಖ ತೃಪ್ತಿ ಆಗಿಹೋಯಿತು ! ಸಾಕು ! ಈಗ ಏನಿದ್ದರೂ ನನ್ನ ತಬ್ಬಲಿ ಮಕ್ಕಳ ಯೋಗಕ್ಷೇಮ! ಅದನ್ನು ನೋಡಿಕೊಳ್ಳುತ್ತೇನೆ.’
‘ಒಳ್ಳೆಯದು ಮೇಷ್ಟ್ರೆ! ನೀವು ನಿಲ್ಲಿರಿ’ ಎಂದು ಹೇಳಿ ರಂಗಣ್ಣ ಬೈಸ್ಕಲ್ ಹತ್ತಿ ಹೊರಟನು.
*****
ಮುಂದುವರೆಯುವುದು