ದುರಾಸೆಯ ದುರ್ಗತಿಗೆ ದೃಷ್ಟಾಂತ-ಬೆನ್ ಜಾನ್ಸನ್‌ನ -Volpone

ದುರಾಸೆಯ ದುರ್ಗತಿಗೆ ದೃಷ್ಟಾಂತ-ಬೆನ್ ಜಾನ್ಸನ್‌ನ -Volpone

“Ligacy Hunting” ಎಂಬುದು ಇಟಾಲಿಯನ್ ಸಂಪ್ರದಾಯ. ಏಕಾಂಗಿಯಾಗಿರುವ ಶ್ರೀಮಂತ ಮುದುಕನ ಆಸ್ತಿಗೆ ಮುಂದಿನ ವಾರಸುದಾರರಾಗಲು ಆತನನ್ನು ಮೆಚ್ಚಿಸಲು ಯೋಗ್ಯವಾಗುವ ಉತ್ಕೃಷ್ಟವಾದ ಮೌಲ್ಯಯುತ ಉಡುಗೊರೆಗಳನ್ನು ಸಲ್ಲಿಸುವ ಮುಖೇನ ಆತನ ಎಲ್ಲ ಆಸ್ತಿಗೆ ಉತ್ತರಾಧಿಕಾರಿಯಾಗಲು ನಡೆಸುವ ಕಸರತ್ತು. ಇದು ಬರೀಯ ಈಟಾಲಿಯನ್ ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ನಾವು ಗಮನಿಸತಕ್ಕದ್ದು. ಇಡಿ ಜಗತ್ತು ಮಾನವ ಕೋಟಿ ಸಂಪತ್ತಿನ ಮುಂದೆ ದೀನ. ಮಾನವನ ಸ್ವಾರ್ಥ ದೇಶ, ಕಾಲಕ್ಕೆ ಅತೀತ. ಲಿಗಸಿ ಹಟಿಂಗ್ ಉದಾಹರಣೆಯನ್ನು ಬಳಸಿ ಸರ್ವಸಾಮಾನ್ಯ ಮನುಷ್ಯನ ನಯವಂಚಕತೆ ಬೂಟಾಟಿಕೆ, ಅಸತ್ಯತೆ ಇತ್ಯಾದಿಗಳನ್ನು ಎತ್ತಿ ತೋರಿಸಿದ್ದಾನೆ ಬೆನ್ ಜಾನಸನ್.

“ವಾಲ್ಫೋನ್” ಬೆನ್ ಜಾನಸನ್‌ನ ಅಪೂರ್ವ ಕೃತಿ. ಲೋಭ, ಶ್ರೀಮಂತನಾಗುವ ಅತಿಯಾದ ತುಡಿತ, ಪಾಶವೀಪ್ರವೃತ್ತಿಯಗಳು ಸಾಮಾನ್ಯ ಮಾನವೀಯ ಮೌಲ್ಯಗಳನ್ನು ಹೇಗೆ ಅತಂತ್ರಗೊಳಿಸುತ್ತವೆ ಎಂಬುದಕ್ಕೆ ವಾಲ್ಪೋನ್ ಉತ್ತಮ ನಿದರ್ಶನ. ಪಶು ಪೃವೃತ್ತಿಯ ಪರಿಕರಗಳು ಮಾನವ ಸಮಾಜದಲ್ಲಿ ಅಪರೂಪವೇನಲ್ಲ. ದೇವನಿಲ್ಲದ, ಮಕ್ಕಳ ಕಿಲಕಿಲ ನಗುವಿರದ, ಬರೀಯ ಕ್ರೂರ ಪ್ರಾಣಿ ಪಕ್ಷಿಗಳಿಂದ ಕೂಡಿದ ಎಲ್ಲ ವಿಕಲತೆಗಳ ಒಳಗೊಂಡ, ಹೃದಯ ಶ್ರೀಮಂತಿಕೆ ಸಂಪೂರ್‍ಣವಾಗಿ ಬುಡಸಮೇತ ಇಲ್ಲವಾಗಿರುವ ಬಂಜರು ಆ ಜಗತ್ತು. ಮಾನವತೆ ಮರೆತ ಆ ಜಗತ್ತಿನಲ್ಲಿ ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಇಲ್ಲ. ಬಂಗಾರದ ಹೊರತಾಗಿ ಬೇರೆ ದೇವರಿಲ್ಲ. ಮೋಸ ಕಪಟತೆ, ನಕಲೀಕರಣಗಳೆ ಆ ಜಗತ್ತನ್ನು ಆಳುತ್ತವೆ. ವಾಲ್ಪೋನ್ ಅಂದರೆ ನರಿ ಎಂದರ್ಥ. ಕಾಮಿಡಿಯ ಮುಖ್ಯಪಾತ್ರ ವಾಲ್ಪೋನ್. ಅವನೊಬ್ಬ ಸ್ಯಾಡಿಸ್ಟ. ಹೆಂಡತಿ ಮಕ್ಕಳಿಲ್ಲದ ವಾಲ್ಫೋನ್ ಏಕಾಂಗಿ. ಆತನ ಮನೆಯಲ್ಲಿರುವ ದ್ವಿಲಿಂಗಿ, ಒಬ್ಬ ಕುಬ್ಜ ಹೀಗೆ ದೈಹಿಕ ಅಸಹಜತೆಯ ಅವರ ಜೊತೆಗಿನ ಒಡನಾಟವನ್ನು ಆನಂದಿಸುತ್ತಾನೆ ವಾಲ್ಫೋನ್. ಆ ಜಗತ್ತಿನಲ್ಲಿ ಪ್ರತಿಯೊಬ್ಬನೂ ಸ್ವಕೇಂದ್ರಿತ. ಸ್ವಲಾಭಕ್ಕಾಗಿ ತುಡಿಯುವ ಸೋಗಿನ ಪಾತ್ರಗಳು. ಕುಲೀನ ಮನೆತನದ ವಾಲ್ಪೋನ್ ಸಾಮಾನ್ಯ ರೈತ ಇಲ್ಲವೇ ವರ್ತಕನಂತೆ ಬದುಕಲೊಲ್ಲ. ಬಡ, ಕೆಳಸ್ತರದ ಜನರೆಂದರೆ ಆತನಿಗೆ ಉದಾಸೀನತೆ. ಶ್ರೀಮಂತಿಕೆ ಗಳಿಸಲು ಆತ ಯಾವುದೇ ಉದ್ಯೋಗ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಂಡಿಲ್ಲ. ಆತ ತನ್ನ ಉಯಿಲಿಗೆ ಹೊಂಚುಹಾಕುವವರಿಂದ ಸಂಪೂರ್ಣ ಭಿನ್ನ. ತನ್ನಲ್ಲಿಯ ಸಂಪತ್ತನ್ನು ಅನುಭವಿಸಿ ಆನಂದಿಸುವ ಬದಲು, ಆತ ತನ್ನ ಕೃಪೆಗೆ ಹಾತೊರೆಯುತ್ತ, ಆಸ್ತಿಗೆ ಬಾಯಬಿಡುವ ಬೆಪ್ಪ ಭಂಡರನ್ನು ತನ್ನ ಮನಬಂದಂತೆ ಕುಣಿಸಿ ಸಂತೋಷಪಡುತ್ತಾನೆ.. ಮೋಸ್ಕಾ ವಾಲ್ಫೋನ್‌ನ ಸೇವಕ. ಎರಡೂ ಪಾತ್ರಗಳು ನಾಟಕದ ಮುಖ್ಯ ಖಳನಾಯಕರು. ಮೋಸ್ಕ ಎಂದರೆ ಪ್ಲೈ, ನೊಣ ಎಂದರ್‍ಥ. ಒಬ್ಬರಿಂದೊಬ್ಬರು ಕಪಟತೆಯಲ್ಲಿ ಮೀರಿಸಬಯಸುತ್ತಾರೆ. ಆದರೆ ಕೊನೆಯಲ್ಲಿ ತಮ್ಮದೇ ಬಲೆಯಲ್ಲಿ ಬಂಧಿಸಲ್ಪಡುತ್ತಾರೆ.

ಸಂಪತ್ತಿನ ದೊರೆ ವಾಲ್ಪೋನ್ ವೃದ್ದನಾಗುತ್ತಿದ್ದಾನೆ. ತನ್ನ ಎಲ್ಲ ಆಸ್ತಿಗೆ ಸರಿಯಾದ ವಾರಸುದಾರರ ಹುಡುಕಾಟದಲ್ಲಿದ್ದಾನೆ. ಆತನ ಸಂಪತ್ತನ್ನು ದೋಚುವ ಹುನ್ನಾರದಲ್ಲಿ ಹಪಾಹಪಿಸುವ ಪಾತ್ರಗಳು ಕಪಟಿಗಳೇ. ವಕೀಲ ವೋಲ್ಟೋರ್, ಜಿಪುಣ ಕೊರ್‍ಬೆಸ್ಸಿಯೋ, ವರ್‍ತಕ ಕೊರ್‍ವಿನೋ ಎಲ್ಲರೂ ಧೂರ್ತಪ್ರತಿನಿಧಿಗಳೇ. ಹದ್ದು ಎಂದು ಅರ್ಥೈಸುವ ಲ್ಯಾಟಿನ್ ಭಾಷೆಯ `vulture ’ಗೆ ಸಂವಾದಿಯಾಗಿ ಜಾನ್ಸನ್ voltore ಬಳಸುತ್ತಾನೆ. ಹಾಗೆ ಕಾಗೆ ಎಂಬ ಅರ್ಥನೀಡುವ ಇಟಾಲಿಯನ್ ಪದ `corbo’ಗೆ ಸಂವಾದಿಯಾಗಿ ವಕೀಲ Corbaccioನನ್ನು. ದೊಂಬಕಾಗೆ ಎಂಬರ್ಥ ನೀಡುವ ಇಟಾಲಿಯನ್ ಶಬ್ದ `corvo’ ಅಥವಾ ರೆವನ್‌ಗೆ ಸಂವಾದಿಯಾಗಿ ವರ್‍ತಕ Corvino ನನ್ನು ಚಿತ್ರಿಸುತ್ತಾನೆ. ಹದ್ದು ದೊಂಬಕಾಗೆ, ಕಾಗೆ ಇವೆಲ್ಲವೂ ವಿಭಿನ್ನ ವ್ಯಕ್ತಿತ್ವದ ಆದರೆ ಹಿಂಸ್ರ ಮಾಂಸಾಹಾರಿ ಪಕ್ಷಿಗಳೇ. ಇವರೆಲ್ಲರನ್ನೂ ಮೀರಿಸುವ ಮತ್ತೊಂದು ಪಾತ್ರ ವಾಲ್ಫೋನ್‌ನ ಸೇವಕ ಮೋಸ್ಕಾ ಅಂದರೆ ಫ್ಲೈ ನೊಣ ಎಂದರ್ಥ. ಮೋಸ್ಕಾ ಈ ಮೂವರಿಗೂ ಅಸ್ತಿಯ ಹುಚ್ಚು ಹಿಡಿಸಿ ದುರಾಶೆಯ ಕೂಪಕ್ಕೆ ತಳ್ಳಿಬಿಟ್ಟಿದ್ದಾನೆ. ಆಶೆಯ ಅಡಿಯಾಳಾದ ಮೂವರು ವಾಲ್ಫೋನನ ಭೆಟಿಗೆ ಕಾಯುತ್ತಿದ್ದಾರೆ. ವಾಲ್ಟೋರ್ ವಾಲ್ಪೋನ್ ಹೆಸರು ಕೆತ್ತಿದ ಬೆಲೆಬಾಳುವ ಹರಿವಾಣವನ್ನು ಕಾಣಿಕೆಯಾಗಿ ತಂದಿದ್ದಾನೆ. ಆತನ ನಂತರ ಕೊರ್‍ಬೇಸ್ಸಿಯೋ ಬಂಗಾರದ ನಾಣ್ಯಗಳ ಚೀಲವನ್ನು ಉಡುಗೊರೆಯಾಗಿ ತಂದಿದ್ದಾನೆ. ವರ್‍ತಕ ಕೊರ್‍ವಿನೋ ಬೆಲೆಬಾಳುವ ಮುತ್ತುಗಳನ್ನು ಹಿಡಿದು ಬಂದಿದ್ದಾನೆ. ಇವೆಲ್ಲವನ್ನೂ ಸ್ವೀಕರಿಸುವ ಮೋಸ್ಕಾ. ಎಲ್ಲರಿಗೂ ಮುಂದಿನ ಹಕ್ಕುದಾರ ನೀನೆ ಎಂಬ ಭ್ರಮೆ ಬರಿಸಿ ಜಾಣತನದಿಂದ ಇವರನ್ನು ಸಾಗಹಾಕುತ್ತಾನೆ. ಆದರೆ ಅನೀರಿಕ್ಷಿತವಾಗಿ ಇನ್ನೊಬ್ಬಳು ಸಂದರ್ಶನಕ್ಕೆ ಕಾದಿದ್ದಾಳೆ. ಆಕೆ ಲೇಡಿ ಪೊಲಿಟಿಕ್ ವುಡ್ ಬಿ. ಆಕೆ ಕೊರವಿನೋನ ಪತ್ನಿ ಅಪೂರ್ವ ಸುಂದರಿ ಸಿಲಿಯಾಳಂತೆ ಕಾಣುತ್ತಾಳೆ ಎಂಬ ಕಾರಣಕ್ಕೆ ಆಕೆಯನ್ನು ಭೇಟಿಯಾಗಲು ಒಪ್ಪುತ್ತಾನೆ ವಾಲ್ಪೋನ್. ಆತನ ಎರಡು ಬಯಕೆಗಳು ತೀರಾ ಕ್ಷುಲಕ ಬಯಕೆಗಳೇ. ಬಂಗಾರ ಮತ್ತು ದೈಹಿಕ ವಾಂಛೆಗಳಿಗೆ ದಾಸನಾದ ಆತ ಆವುಗಳನ್ನು ಅರ್‍ಜಿಸಿಕೊಳ್ಳಲು ನಡೆಸುವ ಕುತಂತ್ರಗಳೇ ನಾಟಕದ ತಿರುಳು. ಆತನ ಕಪಟತೆಯನ್ನು ಮೀರಿಸುವ ಕೃತ್ರಿಮತೆ ಆತನ ಸೇವಕನದು.

ಸಿಲಿಯಾ ವರ್‍ತಕ ಕೊರವಿನೋನ ಪತ್ನಿ. ಸದ್ಗುಣಿ, ಮುಗ್ಧೆ. ವಾಲ್ಪೋನ್ ಸಿಲಿಯಾಳೊಂದಿಗೆ ಬೆರೆಯಬಯಸುತ್ತಾನೆ. ಕೊರ್‍ವಿನೊನ ದುರಾಸೆಯ ಬಲ್ಲ ಮೋಸ್ಕಾ ಕೊರ್‍ವಿನೋ ಪತ್ನಿಯನ್ನು ವಾಲ್ಪೋನ್‌ನಲ್ಲಿಗೆ ಕಳಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾನೆ. ನೈತಿಕ ಪ್ರಜ್ಞೆಯುಳ್ಳ ಸಿಲಿಯಾ ಎಷ್ಟೇ ವಿನಂತಿಸಿದರೂ ವಾಲ್ಪೋನ್ ಆಕೆಯ ಮೇಲೆ ಪ್ರಾಣಿಯಂತೆ ಎರಗುತ್ತಾನೆ. ಆದರೆ ಆದೇ ಕ್ಷಣ ಕೊರ್‍ಬೆಸಿಯೋನ ಮಗ ಬೊನಾರಿಯೋ ಸಿಲಿಯಾಳನ್ನು ಕಾಪಾಡುತ್ತಾನೆ.

ವಾಲ್ಪೋನ್‌ನು ಎಸಗಿದ ಪ್ರಮಾದ ಕೋರ್‍ಟು ಮೆಟ್ಟಿಲೇರುತ್ತದೆ. ಆದರೆ ಸಂಪತ್ತಿನ ಆಶೆಗೆ ಬಲಿಬಿದ್ದ ಕೊರ್‍ವಿನೋ ತನ್ನ ಸ್ವಂತ ಪತ್ನಿ ಸದ್ಗುಣಿ, ಮುಗ್ಧೆ ಸಿಲಿಯಾಳನ್ನು ನಿಂದಿಸುತ್ತಾನೆ. ಕೈಗೆ ಬರುವ ಆಸ್ತಿಯನ್ನು ತಪ್ಪಿಸಿದನೆಂಬ ಕಾರಣಕ್ಕೆ ಬೊನಾರಿಯೋನ ಕೆಲಸದಿಂದ ಆತನ ತಂದೆ ಕ್ರೋಧಗೊಳ್ಳುತ್ತಾನೆ. ಸ್ವಂತ ಮಗನ ವಿರುದ್ಧ ಸಾಕ್ಷಿ ನುಡಿಯುತ್ತಾನೆ. ತನ್ನ ಮಗ ತನ್ನನ್ನು ಕೊಲ್ಲಲು ಪ್ರಯತ್ನಿಸಿದನೆಂದು ಆತನೊಬ್ಬ ನೀಚನೆಂದು ಸಮರ್ಥಿಸುತ್ತಾನೆ. ನ್ಯಾಯ ಸಾಕ್ಷಿಯನ್ನು ಪರಾಂಬರಿಸಿ ಸಿಲಿಯಾ ಬೋನಾರಿಯೋನನ್ನು ತಪ್ಪಿತಸ್ಥರೆಂದು ನಿರ್ಣಯಿಸುತ್ತದೆ. ಮೋಸ್ಕಾ ವಾಲ್ಪೋನ್‌ನ ಆಸ್ತಿಗೆ ಹಕ್ಕು ಹೊಂದುತ್ತಾನೆ. ಹಾಗಾಗಿ ನ್ಯಾಯ ಸ್ಥಾನದ ಮ್ಯಾಜಿಸ್ಟ್ರೇಟ್ ತನ್ನ ಮಗಳನ್ನು ಮೋಸ್ಕಾನಿಗೆ ನೀಡುವ ಇಂಗಿತ ವ್ಯಕ್ತಪಡಿಸುತ್ತಾನೆ. ನ್ಯಾಯದ ತಕ್ಕಡಿ ಹಿಡಿದವರೇ ನಿಯತ್ತಿಲ್ಲದ ನೀಚರಾಗಿ ವರ್ತಿಸುವ ಪರಿ ನಿನ್ನೆ ಮೊನ್ನೆಯದಲ್ಲ. ಎಂಬುದಕ್ಕೆ ನ್ಯಾಯಾಧೀಶ ಸಾಕ್ಷಿಯಾಗುತ್ತಾನೆ.

ಆದರೆ ನಾಟಕದ ಕೊನೆ ಸುಖಾಂತವಾಗಿ ಕೊನೆಗೊಳ್ಳುತ್ತದೆ. ತನ್ನ ಡ್ಯೂಪಗಳನ್ನು ಕುಣಿಸಿ ಆನಂದಪಡಲು ಸಹಕರಿಸುವನೆಂಬ ಕಾರಣಕ್ಕೆ ವಾಲ್ಪೋನ್ ತನ್ನ ಆಸ್ತಿಗೆ ಮೋಸ್ಕಾನನ್ನು ವಾರಸುದಾರನಾಗಿ ಮಾಡುತ್ತಾನೆ ಆದರೆ ಸೇವಕ ಮೋಸ್ಕಾ ತನ್ನ ಒಡೆಯನ ಆಸ್ತಿ ಲಪಟಾಯಿಸಿ ವಾಲ್ಪೋನ್‌ನನ್ನೆ ಬಿಟ್ಟು ಹೊರಡಲು ಅಣಿಯಾಗುತ್ತಾನೆ. ವಿಷಯ ತಿಳಿದ ವಾಲ್ಪೋನ್ ಪುನಃ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾನೆ. ಈಗ ಸತ್ಯಾಂಶ ಹೊರಬಂದು ಕೇಡಿಗಳು ಶಿಕ್ಷೆಗೆ ಒಳಗಾಗುತ್ತಾರೆ. ವಾಲ್ಪೋನ್ ಆಸ್ತಿಯೆಲ್ಲಾ ಆಸ್ಪತ್ರೆ ಪಾಲಾಗುತ್ತದೆ. ಸಿಲಿಯಾ ತವರು ಮನೆ ಸೇರಿಕೊಳ್ಳುತ್ತಾಳೆ. ಬೊನಾರಿಯೋ ಬಿಡುಗಡೆಗೊಳ್ಳುತ್ತಾನೆ.
ದುರಾಚಾರ ಶಿಕ್ಷೆಗೆ ಗುರಿಯಾದರೆ ಸದಾಚಾರ ಪ್ರಶಂಸೆಗೆ ಒಳಗಾಗುತ್ತದೆ. ಈ ನಾಟಕದ ಮೂಲಕ ಬೆನ್ ಜಾನಸನ್ ಸಾರ್ವಕಾಲಿಕ ಸತ್ಯವನ್ನು ಶ್ರುತಪಡಿಸಿದ್ದಾನೆ. ೧೬ನೇ ಶತಮಾನದ ಈ ನಾಟಕ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿಗೆ ಪ್ರಸ್ತುತವೆನಿಸುವುದು ಅದರಲ್ಲಿಯ ನೈತಿಕ ಪ್ರಜ್ಞೆಯ ಪ್ರತಿಪಾದನೆಯಿಂದ. ಹೆಣವನ್ನು ಕಬಳಿಸುವ ಹಿಂಸ್ರ ಮಾಂಸಾಹಾರಿ ಪಕ್ಷಿಗಳು ಮನುಷ್ಯ ಮನುಷ್ಯನ ಕೊಂದು ತಿನ್ನುವ ಇಂದಿನ ಮಾನವ ಜಗತ್ತಿಗೆ ರೂಪಕಗಳಾಗಿ ನಿಲ್ಲುತ್ತವೆ. ನಾವಿಂದು ಬಯಸುತ್ತಿರುವುದು ಬೊನಾರಿಯೋ ಸಿಲಿಯಾರಂತಹ ಸದ್ಗುಣಿಗಳನ್ನು ಎಂಬುದು ಗಮನಾರ್ಹ.

ಇಂಗ್ಲೀಷ ಸಾಹಿತ್ಯದಲ್ಲಿ ಶೇಕ್ಸಪಿಯರ ಅದ್ವಿತೀಯ. ಅದರಲ್ಲೂ ಕೂಡ ಶೇಕ್ಸಪಿಯರನ್ ದುರಂತನಾಟಕಗಳು ಜಗತ್ಪ್ರಸಿದ್ಧ. ಶೆಕ್ಸಪಿಯರನ ಸಮಕಾಲೀನ ಆತನಿಗಿಂತ ಸುಮಾರು ಹತ್ತು ವರ್ಷಗಳಿಗೆ ಕಿರಿಯನಾದ ಬೆನ್ ಜಾನಸನ್ ಶೇಕ್ಸಪಿಯರ್‌ನಿಗಿಂತ ಕಾಮಿಡಿಗಳಲ್ಲಿ ಅಪ್ರತಿಮತೆ ಮೆರೆದ. ಸುಖಾಂತ ನಾಟಕಗಳಲ್ಲೆ ಪ್ರಸಿದ್ಧನಾದ ಇತನ ಬದುಕು ಸುಖಾಂತವಾಗಿರಲಿಲ್ಲ. ಬಡತನದಲ್ಲೇ ಹುಟ್ಟಿ ಬೆಳೆದ ಶ್ರೇಷ್ಟ ಸಾಹಿತಿ ನಾಟಕಕಾರನ ಕೊನೆ ಕೂಡ ದುರಂತದಲ್ಲೇ ಕೊನೆಗೊಂಡಿತು. ೧೫೭೨ರಲ್ಲಿ ವೆಸ್ಟಮಿನಿಸ್ಟರ ಅಬ್ಬೈನಲ್ಲಿ ಜನಿಸಿದ ಬೆನ್ ಜಾನ್ಸನ್ ಕೊನೆಗಾಲದಲ್ಲಿ ಪಾರ್ಶ್ವವಾಯು ಪೀಡಿತನಾಗಿ ೧೬೩೭ರಲ್ಲಿ ಮರಣ ಹೊಂದಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಂಡನ ದಿನಚರಿ
Next post ಕರಿಯ ಪ್ರತಿಮೆ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…