ನಮ್ಮೂರಿನ ಕರಿಯ
ಕಂಠದೊಳಗಿನ ಕೆಂಡದುರಿಯಲ್ಲಿ
ಕೊಂಡ ಹಾಯುವ ಗೆಳೆಯ
ಬಯಸುತ್ತಾನೆ ಮನೆಯ
ಕನಸುತ್ತಾನೆ ಬೆಳೆಯ-
ತೆನ ತೂಗೀತು! ಮನೆ ಮಾಗೀತು
ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು?
ಆಗಸ್ಟ್ ಹದಿನೈದು ಹರಿಯಿತು
ಚಿಂದಿ ಬಾಳಿನ ಬಟ್ಟೆ
ಜನವರಿ ಇಪ್ಪತ್ತಾರು ಮರೆಯಿತು
ಜನಮನದ ಚಿಟ್ಟೆ
ಏಪ್ರಿಲ್ ಹದಿನಾಲ್ಕು- ಮತ್ತೊಂದು ಮೆಲುಕು.
ಅಂಬೇಡ್ಕರ್ ಆತ್ಮವಿಶ್ವಾಸ ಹರಿದದ್ದು
ಕೆಂಡಮಂಡಲ ಮನಸಿನಲ್ಲಿ
ಚಲನೆ ಚಕ್ರ ಜಡತೆಯನ್ನು ಜರೆದದ್ದು
ಕೊಳಕು ಮಂಡಲ ಮೆದುಳಿನಲ್ಲಿ.
ನಮ್ಮ ಕರಿಯ, ಮೇಲೆದ್ದು ಮೆರವಣಿಗೆ ಸೇರಿದ
ಹೊರಾಟ ಹೊತ್ತಿ ಉರಿಯುವಾಗ ಒಳಗೇ ಕರಗಿದ
ಕಾಣಲೇಬೇಕು ಅಂಬೇಡ್ಕರ್ ಎಂದು ಕೊರಗಿದ
ಬೀದಿ ಬೀದಿಯಲ್ಲಿ ಬೆವರು ಬಿತ್ತಿ ಕಂಗಾಲಾಗಿ ತಿರುಗಿದ
ಬಿರುಗಾಳಿಯಲ್ಲಿ ತರಗೆಲೆ ಹಾರುತ್ತಿರುವಾಗ
ವಿಧಾನಸೌಧದ ಮೆಟ್ಟಿಲು ಮೆಟ್ಟಲು ಬಂದ
ಕೂಗುತ್ತಿರುವ ಕಂಠಗಳು ಸೊಂಟಮುರಿದು
ಬಿಕ್ಕುವ ಮನಸ್ಸು ಕಣ್ಣಿಗೆ ಬಂದು ನೋಡಿದ-
ಕರಿಯ ಮೈ ಕಲ್ಲಾಗಿ ನಿಂತಿರುವ
ಅಂಬೇಡ್ಕರ್ ಪ್ರತಿಮೆ ಕಂಡ ಕರಿಯ
ಅಂಬೆಗಾಲಿಡುತ್ತ ಹತ್ತಿರ ಬಂದ
ತನಗೇ ಕೋಟು ಬೂಟು ಹಾಕಿ
ಕಲ್ಲು ನಿಲ್ಲಿಸಿದಂತೆ ಕಂಡು
ದೊಪ್ಪನೆ ಮೂರ್ಛೆಗೆ ಸಂದ!
ಅಂಬೇಡ್ಕರ್ ಕೈ ಕೆಳಗಿಳಿಯಲಿಲ್ಲ
ಕರಿಯನ ಮೈ ಸವರಲಿಲ್ಲ!
ಮೂರ್ಛೆಯೊಂದಿಗೆ ಮಾತಾಡಲಿಲ್ಲ
ಯಾಕೆಂದರೆ ಅದು ಸರ್‍ಕಾರಿ ಪ್ರತಿಮೆ
ಆಚರಣೆಗೆ ಹುಟ್ಟಿದ ಹದಿನಾಲ್ಕರ ಒಲುಮೆ.
*****