ಕ್ರೀಡೆಯ ಅತ್ಯುನ್ನತ ವಿಶಿಷ್ಟ ಸಾಧನೆಗೆ ನೀಡಲಾಗುವ ಭವ್ಯ ಭಾರತದ ಅತ್ಯುನ್ನತ ಶ್ರೇಷ್ಠ ಪ್ರಶಸ್ತಿಯಾದ ರಾಜೀವ್‌ಗಾಂಧಿ ಖೇಲಾ ರತ್ನ ಪ್ರಶಸ್ತಿಗೆ ಹೈದ್ರಾಬಾದಿನ ಟೆನಿಸ್ ಆಟಗಾರ್‍ತಿ ಸಾನಿಯಾ ಮಿರ್‍ಜಾ ಭಾಜನರಾಗಿರುವುದು ಇಡೀ ದೇಶಕ್ಕೆ ಸಂದ ಗೌರವವಾಗಿದೆ.
ಈ ಕೀರ್ತಿಗೆ ಪಾತ್ರರಾದ ಮೊತ್ತಮೊದಲ ಮಹಿಳಾ ಟೆನಿಸ್ ಆಟಗಾರ್‍ತಿ ಎಂಬ ಖ್ಯಾತಿಗೆ ಪಾತ್ರರಾಗಿರುವರು.
ಈ ಮೊದಲು ಕ್ರೀಡಾ ಸಚಿವಾಲಯ ಖೇಲ್ ರತ್ನಕ್ಕೆ ಸಾನಿಯಾ ಮಿರ್‍ಜಾ ಅವರ ಹೆಸರನ್ನು ಶಿಫಾರಸು ಮಾಡಿ, ಪರಿಗಣಿಸುವ ಅಂತಿಮ ತೀರ್‍ಮಾವನ್ನು ಪ್ರಶಸ್ತಿ ಆಯ್ಕೆ ಸಮಿತಿಗೆ ಬಿಟ್ಟಿದ್ದು ಏಕೆಂದರೆ…. ಪ್ರಶಸ್ತಿ ಪೈಪೋಟಿಯಲ್ಲಿ ಈಗಾಗಲೇ ಸ್ಕಾಷ್ ಆಟಗಾರ್‍ತಿ ದೀಪಿಕಾ ಪಳ್ಳಿಕಲ್ – ಡಿಸ್ಕಸ್ ಎಸೆತಗಾರ ವಿಕಾಸ್ ಗೌಡರನ್ನು ಹಿಂದಿಕ್ಕಿ ಆಯ್ಕೆಯಾಗಬೇಕಾಗಿತ್ತು! ಇದು ಸುಲಭ ಸಾಧ್ಯವಲ್ಲದ ಮಾತೆಂದು ಹಲವರು ನಂಬಿದ್ದರು.
೧೯೯೬-೧೯೯೭ ರಲ್ಲಿ ಟೆನ್ನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೀಗ ಅದೇ ಎಂಬಲ್ಡನ್ ಡಬ್ಬಲ್ಸ್ ಚಾಂಪಿಯನ್ ಸಾನಿಯಾ ಟೆನ್ನಿಸ್ ಕ್ರೀಡೆಯಲ್ಲಿ ಈ ಸಾಧನೆ ಮೆರೆದ ಎರಡನೆಯ ಆಟಗಾರ್ತಿಯಾಗಿರುವರು!
ಸಾನಿಯಾ ಮಿರ್ಜಾ ಅವರು ಕಳೆದ ಜುಲೈ ೨೦೧೫ ರಲ್ಲಿ ಸ್ವಿಜರ್ಲೆಂಡಿನ ಮಾರ್ಟಿನಾ ಹಿಂಗಿಸ್ ಜತೆಗೂಡಿ ಎಂಬಲ್ಡನ್ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಮುನ್ನ ಡಬ್ಬಲ್ಸ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್ ಒನ್ ಸ್ಥಾನ ಪಡೆಯುವಲ್ಲಿಯೂ ಅವರು ಈಗಾಗಲೇ ಯಶಸ್ವಿಯಾಗಿರುವರು. ಮಿಶ್ರ ಡಬ್ಬಲ್ಸ್ ವಿಭಾಗದಲ್ಲಿ ಮೂರು ಗ್ರಾನ್ ಸ್ಲ್ಯಾಮ್ ಜಯಿಸಿರುವ ಸಾನಿಯಾ ಮಿರ್ಜಾ ಅವರಿಗೆ ಈ ಪ್ರಶಸ್ತಿ ದಕ್ಕಿದೆ!
ಸಾನಿಯಾ ಮಿರ್ಜಾ ೨೦೧೪ ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮಿಶ್ರ ಹಾಗೂ ಮಹಿಳಾ ಡಬಲ್ಸ್ ವಿಭಾಗದಲ್ಲಿ ಅನುಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಗಳಿಸಿದ್ದರು.
೨೦೦೪ ರಲ್ಲಿ ಅರ್ಜುನ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ಸಾನಿಯಾ ಮಿರ್ಜಾ ಅವರು ಭವ್ಯಭಾರತದ ನಾಲ್ಕನೆಯ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀಗೆ ಪಾತ್ರರಾಗಿರುವರು.
ಈಗ ಅವರ ಸಾಧನೆಗೆ ಖೇಲ್‌ರತ್ನ ಪ್ರಶಸ್ತಿಯೂ ಮುಡಿಗೇರಿರುವುದು. ನಾವು ನೀವು ಎಲ್ಲರೂ ಸಾನಿಯಾ ಮಿರ್ಜಾ ಅವರಿಗೆ ಆಲ್ ದಿ ಬೆಸ್ಟ್ ಹೇಳೋಣ. ಅವರ ಸಾಧನೆ ನಿಮಗೆಲ್ಲ ಸ್ಫೂರ್ತಿಯ ಸೆಲೆ, ದಾರಿ ದೀಪ, ಚೈತನ್ಯದ ಚಿಲುಮೆಯಾಗಲಿ ಸಾನಿಯಾ ಮಿರ್‍ಜಾ ಅವರಂತೆ ಹತ್ತಾರು ಮಹಾ ಸಾಧಕಿಯರೂ… ಪ್ರತಿಭೆಗಳೂ… ಇಲ್ಲಿ ಸದಾ ತಲೆಯೆತ್ತಲಿಯೆಂದು ಹರಸೋಣವಲ್ಲವೇ?
*****