ಅಡವಿಯನ್ನಿ ಮರನೆ
ಗಿಡವ ಬನ್ನಿ ಮರನೆ
ಅಡವ್ಯಾಗೆ ಇರುವಂಥ
ಸಾರಂಗ ಸರದೂಳಿ
ಹೆಬ್ಬುಽಲಿ ಹುಲಿಕರಡಿ
ಎಡಬಲ ಹಾಂವುತೇಳೋ ದೇವಾ|
ಎನ್ನ ಮೇಲಾಡಿ ಶ್ರೀಗಂಗೀನ ತಂದಿ|
ಎನ್ನ ತಪ್ಪೇನು ಕಂಡಿ ||೧||
ಪಟ್ಟಣದ ದಾರಿ ಮ್ಯಾಲ
ಹಿಟ್ಟಗಳ್ಲಿನ ಮ್ಯಾಲ
ಕತ್ತಿಽಯ ವರಿಯಂಗ
ವರಿಯವರು ಇದ್ದಲ್ಲಿ
ಇಪ್ಪತ್ತು ಗಾಂವುದ ತಪನಿದ್ದೊಽ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ|
ಎನ್ನ ತಪ್ಪೇನು ಕಂಡಿ ||೨||
ಸಾರಂಗ ದಾರಿಮ್ಯಾಲ
ಸಾಲಗಲ್ಲಿನ ಮ್ಯಾಲ
ಛೂಜಿಽಯ ಮಣಿಯಂಗ
ಮಣಿಯವರು ಇದ್ದಲ್ಲಿ
ನಾಲ್ಪತ್ತು ಗಾಂವುರದ ತಪನಿದ್ದೊಽ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ |
ಎನ್ನ ತಪ್ಪೇನು ಕಂಡಿ ||೩||
ತನುವ ಇಲ್ಲದ ಗಂಗಿ
ಥಣ್ಣೀರಿಗ್ಹೋದಾಗ
ನಿಂಬೀಹಣ್ಣಿಽನಂಗ
ತುಂಬಿಽದ ಕುಚಗಳು
ಬಂದ ಕುಂತಾಳ ಜಡಿಯೊಳಗೋ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ |
ಎನ್ನ ತಪ್ಪೇನು ಕಂಡಿ ||೪||
ಒಟ್ಟಿಽದ ಭಣವಿಽಗಿ
ಕಿಚಗುಳ್ಳ ಬಿದ್ದಂಗ
ಮುತ್ತಿಽನ ರಾಸಿಽಗಿ
ಕಳ್ಳರು ಬಿದ್ದಂಗ
ಚಿಕ್ಕಂದಿನೊಗತಾನಾ
ಮತ್ತೊಬ್ಳಿಗಾಯ್ತಂದ
ಹೊಟ್ಯಾಗ ಭೆಂಕಿ ಬರಕ್ಯಾದೋ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ |
ಎನ್ನ ತಪ್ಪೇನು ಕಂಡಿ ||೫||
*****
ಇದೊಂದು ಭಾವಗೀತೆ. ಲೆಕ್ಕದಂತೆ ಮುಂದಿನ ವಿಭಾಗದಲ್ಲಿ ಸೇರಿಸಬೇಕಿತ್ತು. ಅದರೆ ಈ ನಾಡಿನ ವಿಷಯವು ಪ್ರಣಯಾಂತರದ ಪರಿತಾಪವನ್ನು ಸ್ಪಷ್ಟಗೊಳಿಸುವುದರಿಂದ ಈ ನಿಭಾಗದಲ್ಲಿಯೇ ಸೇರಿಸಬೇಕಾಯಿತು. ಇದರಲ್ಲಿ ಗಂಗೆಗೆ ಶಿವನೊಲಿದದ್ದಕ್ಕಾಗಿ ಗೌರಿಯು ಅನುತಾಪಗೊಳ್ಳುವಳು. ಹಿಂದೆ ಗಿರಿರಾಜನ ಮನೆಯಲ್ಲಿದ್ದಾಗ ಶಿವನ ಸಲುವಾಗಿ ಮಾಡಿದ ಘೋರತಪಶ್ಚರ್ಯವನ್ನೆಲ್ಲ ನೆನಪಿಗೆ ತಂದುಕೊಟ್ಟು ಶಿವನ ಎದುರಿಗೇ ಕನವರಿಸುತ್ತಾಳೆ.
ಆನ್ನೀಮರ, ಬನ್ನೀಮರ ಮುಂತಾದವುಗಳಿಂದ ತುಂಬಿದ ಕಟ್ಟಡವಿಯೊಳಗೆ ಹಿಂಸ್ರಪಶುಗಳ ಮಧ್ಯದಲ್ಲಿ ತಾನು ತಪಗೈದೆನೆಂದು ಮೊದಲನೆಯ ನುಡಿಯಲ್ಲಿ, ಸ್ವರ್ಗನಗರಿಯ ದಾರಿಯಲ್ಲಿ ಕಲ್ಲುಬಂಡೆಗಳ ಮೇಲೆ ಕುಳಿತು, ಬಗೆ ಬಗೆಯ ರಾಕ್ಷಸರ ತೊಂದರೆಯನ್ನು ಸಹಿಸಿ, ಹತ್ತಿಪ್ಪತ್ತು ಯುಗಗಳ ವರೆಗೆ ತಪಗೈದೆನೆಂದು ಎರಡನೆಯ ಮೂರನೆಯ ನುಡಿಗಳಲ್ಲಿ ಹೇಳುತ್ತಾಳೆ.
ಛಂದಸ್ಸು:- ಲಲಿತರಗಳೆ
ಶಬ್ದಪ್ರಯೋಗಗಳು:- ಸಾರಂಗಸರದೂಳಿ=ಸಾರಂಗ ಮತ್ತು ಶಾರ್ದೂಲ. ಎನ್ನ ಮೇಲಾಡಿ=ನನ್ನ ಮೇಲೆ ಮೇಲಾಟಿಮಾಡಿ, ಅಥವಾ ನನಗಿಂತ ಮಿಗಿಲೆಂದು. ಪಟ್ಟಣದ ದಾರಿ=ಕೈಲಾಸ ಪಟ್ಟಣದ ದಾರಿ. ಕತ್ತೀಯ ವರಿಯವರು=ಚರ್ಮದ ಚೀಲದಲ್ಲಿ ಮುಚ್ಚಿದ ಖಡ್ಗವನ್ನು ಧರಿಸಿದ ಅಮಾನುಷರು. ಗಾಂವದ=ಗಾವುದ. ಈ ಶಬ್ದವನ್ನು ಇಲ್ಲಿ `ಯುಗ’ ಎಂಬ ಅರ್ಧದಲ್ಲಿ ಉಪಯೋಗಿಸಿದೆ. ಸಾರಂಗ ದಾರಿ=ಸ್ವರ್ಗ ದಾರಿ. ತಪನಿದ್ದ=ತಪವಿದ್ದೆನು. ಭಣವಿ=ಸೊಪ್ಪಿನ ಬಣಿವೆ ಅಧವಾ ಒಟ್ಟಲು. ಕಿಚಗುಳ್ಳ=ಕಿಚ್ಚಿನ ಬೆರಣಿ, ಎಂದರೆ ಕೆಂಡ. ಒಗತನ=ದಾಂಪತ್ಯ. ಬರಕ್ಯಾದ=ಸುರುವಿದೆ.