ಹೊಟ್ಟೆಪಾಡಿಗೆ ದೂರದೇಶ ತಿರುಗಿ
ಮಿಠಾಯಿ ಮಾರಿ ಮಕ್ಕಳಿಗೆ ಕಥೆ ಹೇಳಿ
ನಗಿಸಿ ಅವರೊಳಗೆ ನನ್ನ ಕಂಡು
ಮಗಳು ಹೇಗಿದ್ದಾಳೋ ಎಂದಂದು
ಕರುಳು ಕತ್ತರಿಸಿದನುಭವಕೆ ಕಣ್ಣೀರು ಸುರಿಸಿ
ಭಾವನೆಗಳನ್ನೊತ್ತಿ ಗಂಟಲು ಬಿಗಿದದ್ದು…
ಅದೊಂದು ಸುಂದರ ಬೆಳಗು ನಮಗಾಗಿ
ಹಿಂದಿರುಗಿ ಬಂದೆಯಲ್ಲಪ್ಪ ನಮ್ಮೂರಿಗೆ
ದ್ರಾಕ್ಷಿ ಬದಾಮು ಖರ್ಜೂರು ಮಾರುವ
ಕೈಗೇತಕ್ಕೆ ಈಗ ಬಂದೂಕು ಗುಂಡುಗಳ ಸರಮಾಲೆ
ಯಾಕಿಷ್ಟೊಂದು ಕಠೋರ; ಅಪ್ಪಾ ಹೆದರಿ ಗುಬ್ಬಚ್ಚಿಯಾಗಿದ್ದೇನೆ.
ಸಿಹಿಯಾಗಿರುವ ನೀನು ಯಾಕಿಷ್ಟೊಂದು ವಿಷವಾದೆ.
ಈ ಹಾದಿ ಈ ಅಟ್ಟಹಾಸ ಬೇಡವೆಂದೆ
ಪ್ರಯತ್ನಿಸಿದೆ ಬಂದೂಕು ಕಿತ್ತೆಸೆಯಲು
ದೇವರೇ ನನ್ನಪ್ಪನಿಗೆ ಬುದ್ಧಿ ಕೊಡೆಂದೆ
ಪ್ರಾರ್ಥಿಸಿದ ಮೊಳಕಾಲೂರಿ ಬೇಡಿಕೊಂಡೆ
ಬದಲಾಗಿ ನನಗೆ ಓದಿಸಪ್ಪ; ಹಲುಬಿ ಹಂಬಲಿಸಿದೆ.
ಹಾಳು ಹೆಣ್ಣಿಗೆ ಅಕ್ಷರ ಓದು ಕೇಡೆಂದು
ನನ್ನೆದೆಗೆ ಗುಂಡಿಟ್ಟೆಯಲ್ಲಪ್ಪ…
ಬದುಕಿದ್ದೇನೆ ಇನ್ನೂ ಕನಸುಗಳ ಹೊತ್ತು
ಬಾಪ್ಪ ಮತ್ತೊಮ್ಮೆ ಮಿಠಾಯಿ ಮಾರು ಬಾ
ಬಂದೂಕು ಚೆಲ್ಲು ಮಾನವೀಯತೆ ಮೆರೆ
ನೋಡಪ್ಪ ನಾನು ನಿನ್ನ ಮಗಳು ಮಲಾಲಾ
ನನ್ನೊಂದಿಗೆ ನೀನು ನಿನ್ನೊಂದಿಗೆ ನಾನಿದ್ದು
ವಿಶ್ವಶಾಂತಿಗೆ ಕೈಜೋಡಿಸೋಣ ಬಾಪ್ಪ
ಬಾ ಬಾ ನನ್ನಪ್ಪ ಹೃದಯವಂತನಾಗು ಅಪ್ಪಾ.
*****
(ವಿಶ್ವಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಅತೀ ಚಿಕ್ಕವಯಸ್ಸಿನ ಹುಡುಗಿ ಪಾಕಿಸ್ತಾನ (ಅಪಘಾನಿಸ್ತಾನ)ದವಳು. ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕೆ ವಿರೋಧವಿರುವ ಉಗ್ರರಿಂದ ಗುಂಡೇಟಿಗೆ ಬಲಿಯಾಗಿ ಬದುಕಿ ಉಳಿದು ಹೆಣ್ಣುಮಕ್ಕಳ ಹಕ್ಕಿಗಾಗಿ ಹೋರಾಡುತ್ತಿದ್ದಾಳೆ.)