ಸೃಷ್ಟಿ ಚೈತನ್ಯಮೂಡಿ ಕಣಕಣವೂ ಚಿಗುರೊಡೆದು
ಮೈತುಂಬಾ ಬಂಗಾರ ಹುಡಿ
ಅಂಕುಡೊಂಕು ಗುಡ್ಡ ಬೆಟ್ಟ ಕೊಳ್ಳಗಳ
ಗೋಜಲು ಗದ್ದಲಗಳ ದಾಟಿ ಸುಳಿದಾಡಿ
ನಿರುಮ್ಮಳ ಹರಿವ ಜೀವನ್ಮುಖಿ
ಹೊಲಗದ್ದೆ ಹಸಿರು ಹೂಗಳ ಮೇಲೆಲ್ಲ ಇಬ್ಬನಿ
ಕೋಶ ಒಡೆದು ಹೊರಬಂದ ಚಿಟ್ಟೆ
ರೆಕ್ಕೆ ಬಿಚ್ಚಿ ಹಾರಾಡಿ ಹುಳ ಹುಪ್ಪಡಿ
ಅಳಿಲು ಕೋಗಿಲೆ ಗುಬ್ಬಚ್ಚಿಗಳ ಚಿಲಿಪಿಲಿಯಲಿ
ಸೃಷ್ಟಿಯ ಪರಾಕು ಮೈತುಂಬಾ ಬಣ್ಣ.
ಬಿಳಿ ಪುಟಗಳ ಮೇಲೆಲ್ಲ ಅಕ್ಷರಗಳ ಆಟ
ಎದೆಯಿಂದ ಎದೆಗೆ ಭಾವನೆಗಳ ಓಡಾಟ
ಮುಖ ತುಂಬ ಮಂದಸ್ಮಿತ
ದೇವರಿದ್ದಾನೆ ಇಲ್ಲೆಲ್ಲೊ
ಮಾತಿಗಿಳಿದು ಕೈಹಿಡಿದೊಯ್ಯುತ್ತಾನೆ ಎಲ್ಲೆಲ್ಲೊ!
ಕರೆದೆಡೆ ಹೋಗದಿರುವುದೇ ಹೇಳಿ?
ಸುಖ ದುಃಖಗಳಿಗೆ ಭಾಗಿಯಾಗಿಸುತ
ತನ್ನೆಡೆಗೆ ಎಳೆಯುವ ರೀತಿಗೆ
ಆಕಾಶ ಸಾಕ್ಷಿ ದೂರ ದೂರ ಕ್ಷಿತಿಜ
ನಮ್ಮೊಳಗಿನ ಪ್ರತಿಫಲನಕೆ ಸಮುದ್ರ
*****