ಎಷ್ಟೊ ಜನ ತಮ್ಮ ಚೆಲುವಿನ ಹಮ್ಮಿನಲಿ ಸೊಕ್ಕಿ
ಕ್ರೂರರಾಗುವರು, ನೀನೂ ಕೂಡ ಅಂತೆಯೇ ;
ನನ್ನ ಹೃದಯವೊ ನಿನ್ನ ಹುಚ್ಚುಸುಳಿಯಲಿ ಸಿಕ್ಕಿ
ನೀ ಬಲ್ಲೆ ಅಪ್ಸರೆ ಬರಿ ನಿನ್ನ ಚಿಂತೆಯೇ.
ಮಣಿಸಿ ಕುಣಿಸುವ ಮಾಯೆ ನಿನ್ನ ಚೆಲುವಿಗೆ ಇಲ್ಲ
ಎಂದು ಕೆಲವರು ನಿನ್ನನಿಳಿಸಿ ನುಡಿದದ್ದುಂಟು;
ಸುಳ್ಳೆಂದು ಅಲ್ಲಗಳೆಯುವ ಬಲವು ನನಗಿಲ್ಲ,
ಆದರೂ ಮನದೊಳಗೆ ಅವನು ಹಳಿದದ್ದುಂಟು.
ನಿನ್ನ ಮುಖ ನೆನೆದೆನೋ ಚೆನ್ನೆ ನನ್ನೆದೆಯಿಂದ
ನಿಟ್ಟುಸಿರ ಅಲೆಸಾಲೆ ಹುಟ್ಟಿ ಹರಿಯುತ್ತವೆ.
ಕಪ್ಪು ಎಲ್ಲಕ್ಕಿಂತ ಒಪ್ಪು, ಮೋಹಕ, ಚೆಂದ
ಎಂಬ ನನ್ನ ಮತಕ್ಕೆ ಸಾಕ್ಷಿ ನುಡಿಯುತ್ತದೆ.
ಕೃತಿಬಿಟ್ಬು ಬೇರೆ ಯಾವುದರಲ್ಲು ಕಪ್ಪಲ್ಲ,
ಅದಕೆಂದೆ ನಿನಗೆ ಅಪವಾದ ತಪ್ಪಿದ್ದಲ್ಲ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 131
Thou art as tyrannous, so as thou art