ಶಿಫಾರಸು ಪತ್ರ
ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ ಮೇಲೆ ಕೈ ಕಾಲು ನೋವು ಹೆಚ್ಚಾಗಿ ಎರಡು ದಿನ ರಜ ತೆಗೆದು ಕೊಳ್ಳಬೇಕಾಯಿತು. ಅವನ ಹೆಂಡತಿ ‘ಈ ಹಾಳು ಸರ್ಕೀಟು ಕಡಮೆಮಾಡಿ ಎಂದರೆ ನೀವು ಕೇಳುವುದಿಲ್ಲ. ಗಟ್ಟಿಯಾಗಿ ರೋವರೆಗೂ ದುಡಿಯುತ್ತೀರಿ. ಹಾಸಿಗೆ ಹಿಡಿದರೆ ನಮ್ಮ ಗತಿಯೇನು ? ಅದೇತಕ್ಕೆ ಅಷ್ಟೆಲ್ಲ ಸುತ್ತಬೇಕು ? ಮೊನ್ನೆ ನಾಗರ ಹಾವಿನ ಕೈಗೆ ಸಿಕ್ಕಿ ಬೀಳುತ್ತಿದ್ದಿರಲ್ಲ! ನನ್ನ ಓಲೆ ಭಾಗ್ಯ ಚೆನ್ನಾಗಿತ್ತು! ಖಂಡಿತ ಇನ್ನು ಮುಂದೆ ಹಾಗೆಲ್ಲ ಒಂಟಿಯಾಗಿ ಸುತ್ತಬೇಡಿ. ಜೊತೆಯಲ್ಲಿ ಶಂಕರಪ್ಪನನ್ನೋ ಗೋಪಾಲನನ್ನೂ ಕರೆದುಕೊಂಡು ಹೋಗಿ, ಒಂದೋ ಬಸ್ಸಿನಲ್ಲಿ ಹೋಗಿ ಬಿಟ್ಟು ಬನ್ನಿ ; ಇಲ್ಲವೋ ಎತ್ತಿನ ಗಾಡಿಯನ್ನು ಮಾಡಿಕೊಂಡು ಹೋಗಿ, ನೀವೆಷ್ಟು ಮೈ ಕೈ ನೋಯಿಸಿ ಕೊಂಡು ದುಡಿದರೂ ನಿಮ್ಮನ್ನು ಮೆಚ್ಚುವವರು ಯಾರೂ ಇಲ್ಲ. ಕೆಲಸ ಮಾಡದೆ ಸುಖವಾಗಿ ಸಂಬಳ ತಿನ್ನುವವರೂ ಒಂದೇ ನೀವೂ ಒಂದೇ ನಿಮ್ಮ ಇಲಾಖೆಯಲ್ಲಿ!’ ಎಂದು ಕಾಂತಾಸಂಮಿತಿಯಿಂದಲೇ- ಹಿತೋಪ ದೇಶವನ್ನು ಮಾಡಿದಳು.
ಒಂದು ವಾರದ ತರುವಾಯ ರಂಗಣ್ಣನ ದೇಹಸ್ಥಿತಿ ಸುಧಾರಿಸಿತು. ಆದರೆ ಸುತ್ತಾಟವನ್ನು ಕಡಮೆ ಮಾಡಬೇಕೆಂದು ನಿರ್ಧಾರ ಮಾಡಿಕೊಂಡನು. ಆ ದಿನದ ಟಪ್ಪಾಲಿನಲ್ಲಿ ಅವನ ಸ್ವಂತ ವಿಳಾಸಕ್ಕೆ ಮೂರು ಕಾಗದಗಳು ಬಂದುವು. ಒಂದು ದೊಡ್ಡ ಸಾಹೇಬರ ಕಚೇರಿಯಿಂದ ಬಂದಿತ್ತು. ಆತುರದಿಂದ ಅದನ್ನು ಒಡೆದು ನೋಡಿದನು. ರಂಗಣ್ಣನ ಮುಖ ಸಪ್ಪಗಾಯಿತು. ಅದರಲ್ಲಿ ನಾಲ್ಕೆ ಪಂಕ್ತಿಗಳ ಒಕ್ಕಣೆಯಿತ್ತು. ಇಂಗ್ಲಿಷಿನಲ್ಲಿದ್ದುದರ ಸರಿ ಸುಮಾರು ಭಾಷಾಂತರವಿದು : ‘ನೀವು ಈಚೆಗೆ ರಾಜಕೀಯದಲ್ಲಿ ಪ್ರವೇಶಿಸುತ್ತಿದ್ದೀರೆಂದೂ, ಪಾರ್ಟಿಗಳನ್ನು ಕಟ್ಟುತ್ತಿದ್ದೀರೆಂದೂ ನಮ್ಮ ಗಮನಕ್ಕೆ ಬಂದಿದೆ ಅಂತಹ ಹವ್ಯಾಸಗಳಿಗೆ ಹೋಗ ಕೂಡದೆಂದು ತೀವ್ರವಾಗಿ ಎಚ್ಚರಿಸಿದೆ. ಈ ಕಾಗದ ಸೇರಿದ್ದಕ್ಕೆ ಮರು ಟಪಾಲಿನಲ್ಲಿ ಉತ್ತರ ಕೊಡಿ.’
ಎರಡನೆಯ ಕಾಗದ ಡಿ. ಇ. ಓ. ಸಾಹೇಬರದು. ಕಚೇರಿ ತನಿಖೆ ಮಾಡುವುದಕ್ಕಾಗಿಯೂ ರೇಂಜಿನ ಪಾಠಶಾಲೆಗಳನ್ನು ನೋಡುವುದಕ್ಕಾಗಿಯೂ ನಾಳೆಯೇ ಬರುವುದಾಗಿ ಅದರಲ್ಲಿ ಒಕ್ಕಣೆಯಿತ್ತು. ಮೂರನೆಯ ಕಾಗದ ತಿಮ್ಮರಾಯಪ್ಪನದು. ಅದನ್ನು ಒಡೆದು ನೋಡಿದಾಗ ಸಾರಾಂಶ ಈ ರೀತಿಯಿತ್ತು : ‘ನಿನ್ನ ಕಾಗದ ಬಂದು ಸೇರಿ ಅಭಿಪ್ರಾಯವಾಯಿತು. ನೀನು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಮೊದಲನೆಯ ಮನುಷ್ಯ ನೊಡನೆ ಪತ್ರವ್ಯವಹಾರ ನಡೆಸಬೇಡ, ಅವನಿಂದ ಏನೊಂದು ಸಮಜಾಯಿಷಿಗಳನ್ನೂ ಕೇಳ ಬೇಡ, ಅಮಲ್ದಾರರಿಗೆ ಬರೆದು ಇರುವ ಜಮೀನುಗಳ ಮತ್ತು ಕಟ್ಟುವ ಕಂದಾಯಗಳ ವಿವರಗಳನ್ನು ಕೇಳು, ಸ್ಟೇಷನ್ ಮಾಸ್ಟರಿಗೆ ಕಾಗದ ಬರೆದು ಗ್ಯಾಂಗ್ ಕೂಲಿಗಳ ಪಟ್ಟಿಯನ್ನು ತರಿಸಿಕೋ, ಆ ಮನುಷ್ಯ ಗ್ಯಾಂಗ್ ಕೂಲಿಯೇ ಏನು ? ಜಂಬ ಬಗ್ಗೆ ಉತ್ತರ ತರಿಸಿಕೊ, ರಿಕಾರ್ಡುಗಳನ್ನು ಬಲ ಪಡಿಸಿಕೊಂಡು ಪತ್ತೆ ಕೊಡದೆ ನಿನ್ನ ವರದಿಯೊಂದಿಗೆ ಎಲ್ಲವನ್ನೂ ಮೇಲಕ್ಕೆ ಹೊತ್ತು ಹಾಕು. ಎಲ್ಲ ಕಾಗದಗಳ ನಕಲುಗಳನ್ನೂ ದಾಖಲೆಗಳನ್ನೂ ನಿನ್ನಲ್ಲೆ ಸ್ವಂತ ಪೆಟ್ಟಿಗೆಯಲ್ಲಿ ಇಟ್ಟುಕೋ. ಕಚೇರಿಯವರಿಗೆ ಏನನ್ನೂ ತಿಳಿಸ ಬೇಡ, ಏನನ್ನೂ ಕೊಡ ಬೇಡ.’
‘ಎರಡನೆಯ ದೊಡ್ಡ ಮನುಷ್ಯನ ವಿಚಾರ : ನೀನು ಮಾಡಬೇಕೆಂದಿರುವುದು ಸರಿ ಆದರೆ ಎಲ್ಲವೂ ಬರವಣಿಗೆಯಲ್ಲಿರಲಿ. ಬಾಯಿಮಾತು ಕೆಲಸಕ್ಕೆ ಬಾರದು. ಅದೂ ಅಲ್ಲದೆ ಗಾಳಿಹುಂಜದಂತೆ ಜನ ಹೇಗೆಂದರೆ ಹಾಗೆ ತಿರುಗಿಬಿಡುತ್ತಾರೆ; ಸಮಯದಲ್ಲಿ ಕೈ ಬಿಡುತ್ತಾರೆ; ಆದ್ದರಿಂದ ನಂಬ ಬೇಡ. ಅವರು ಹೇಳುವುದನ್ನೆಲ್ಲ ಬರೆದು ಕಳಿಸಲಿ, ರಿಕಾರ್ಡು ಬೆಳಸು. ಮಧ್ಯೆ ಬಿಡುವಾದಾಗ ಒಂದು ಸಲ ಬಂದು ಹೋಗು ನಾನು ಸಿದ್ದಪ್ಪನನ್ನು ಕಂಡು ಮಾತನಾಡಿದ್ದೇನೆ. ಮುಂದೆ ನೀನು ಇಲ್ಲಿಗೆ ಬಂದಾಗ ನನ್ನ ಮನೆಯಲ್ಲಿ ಭೇಟಿ ಮಾಡಿಸುತ್ತೇನೆ. ಕೊನೆಯ ಮಾತು : ಬಲವದ್ವಿರೋಧ ಅಪಾಯಕರ ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ ಎಚ್ಚರಿಕೆ ಯಿಂದ ನಡೆದುಕೋ.’
ರಂಗಣ್ಣನಿಗೆ ತಿಮ್ಮರಾಯಪ್ಪನ ಕಾಗದದಿಂದ ಮನಸ್ಸಿಗೆ ಸ್ವಲ್ಪ ಸಮಾಧಾನವಾದರೂ ಅಷ್ಟೇನೂ ಸಂತೋಷವಾಗಲಿಲ್ಲ. ತಾನಾಗಿ ಯಾರೊಡನೆಯೂ ವಿರೋಧ ಕಟ್ಟಿ ಕೊಳ್ಳ ಬೇಕೆಂದಾಗಲಿ ಜಗಳ ಕಾಯ ಬೇಕೆಂದಾಗಲಿ ಹಾತೊರೆಯುತ್ತಿಲ್ಲ. ಆದರೆ ಅವು ಆಪ್ರಾರ್ಥಿತವಾಗಿ ಬಂದು ಗಂಟು ಬೀಳುತ್ತವೆ. ಏನು ಮಾಡಬೇಕು? ಎಂದು ಆಲೋಚಿಸುತ್ತಿದ್ದನು. ಆಗ ಜನಾರ್ದನ ಪುರದ ಮುನಿಸಿಪಲ್ ಕೌನ್ಸಿಲರಾದ ಚೆನ್ನಪ್ಪ ನವರು ಬಂದಿದ್ದಾರೆಂದು ಆಳು ಬಂದು ತಿಳಿಸಿದನು, ಅವರನ್ನು ಬರಮಾಡಿ ಕೊಂಡದ್ದಾಯಿತು. ಚೆನ್ನಪ್ಪ ತನ್ನ ಜೇಬಿನಿಂದ ಒಂದು ಕಾಗದವನ್ನು ತೆಗೆದು ರಂಗಣ್ಣನ ಕೈಗೆ ಕೊಡುತ್ತಾ, “ಕರಿಯಪ್ಪನವರು ಕಾಗದವನ್ನು ಕೊಟ್ಟಿದ್ದಾರೆ. ಅವರೇ ತಮ್ಮನ್ನು ಕಂಡು ಮಾತನಾಡಬೇಕೆಂದಿದ್ದರು ? ಎಂದು ಹೇಳಿದನು. ಸ್ಕಾಲರ್ ಷಿಪ್ ವಿಚಾರ ಒಕ್ಕಣೆಯಿರಬಹುದೆಂದು ರಂಗಣ್ಣ ಆಲೋಚಿಸುತ್ತ ಕಾಗದವನ್ನು ಒಡೆದು ನೋಡಿದನು. ಆದರೆ ಆ ಪ್ರಸ್ತಾಪ ಅದರಲ್ಲಿರಲಿಲ್ಲ. ‘ಚೆನ್ನಪ್ಪನವರು ಒಂದು ಕೋರಿಕೆಯನ್ನು ಸಲ್ಲಿಸಲು ಬರುತ್ತಾರೆ. ಅದನ್ನು ದಯವಿಟ್ಟು ನೆರವೇರಿಸಿಕೊಡಿ. ನನಗೂ ಸಂತೋಷವಾಗುತ್ತದೆ’ – ಎಂದು ಬರೆದಿತ್ತು.
‘ಏನು ಸಮಾಚಾರ ? ಕರಿಯಪ್ಪನವರ ಶಿಫಾರಸು ನಿಮಗೆ ಬೇಕಾಗಿತ್ತೇ ? ನಾನು ನಿಮ್ಮ ಊರಿನವನೇ ಆಗಿದ್ದೆನಲ್ಲ?’ ಎಂದು ರಂಗಣ್ಣ ಉಪಚಾರೋಕ್ತಿಯನ್ನಾಡಿದನು.
‘ಶಿಫಾರಸು ತರಬೇಕೆಂದು ನಾನು ಪ್ರಯತ್ನ ಪಡಲಿಲ್ಲ ಸಾರ್ ! ಮೊನ್ನೆ ಕರಿಯಪ್ಪನವರನ್ನು ಕಂಡಿದ್ದೆ. ಹೀಗೆಯೇ ಸ್ಕೂಲುಗಳ ವಿಚಾರ ಮಾತುಕತೆ ಆಡುತ್ತಿದ್ದೆವು ನಿಮ್ಮ ಮಾತು ಸಹ ಬಂತು. ಹಿಂದಿನವರು ಕೆಲವು ಅನ್ಯಾಯಗಳನ್ನು ಮಾಡಿ ಮೇಷ್ಟರುಗಳಿಗೆಲ್ಲ ತೊಂದರೆ ಕೊಟ್ಟರು. ಕೆಲವರನ್ನು ಎಲ್ಲೆಲ್ಲಿಗೋ ವರ್ಗ ಮಾಡಿಸಿಬಿಟ್ಟರು. ಈಗ ಆ ಅನ್ಯಾಯ ಗಳಲ್ಲಿ ಒಂದೆರಡನ್ನಾದರೂ ಸರಿ ಪಡಿಸಬೇಕೆಂದು ನಾನು ಕರಿಯಪ್ಪನವರಲ್ಲಿ ಹೇಳುತ್ತಿದ್ದೆ. ಆಗ ಅವರು-ನಾನು ಇನ್‌ಸ್ಪೆಕ್ಟರಿಗೆ ಕಾಗದ ಕೊಡುತ್ತೇನೆ. ಕಂಡು ಮಾತನಾಡು- ಎಂದು ಹೇಳಿ ಇದನ್ನು ಬರೆದು ಕೊಟ್ಟರು.’
‘ನಾನಾ ಕಾರಣಗಳಿಗಾಗಿ ಮೇಷ್ಟರುಗಳಿಗೆ ವರ್ಗಗಳಾಗುತ್ತವೆ. ಏನಾದರೂ ನಿಜವಾದ ತೊಂದರೆಗಳಾಗಿದ್ದರೆ ಮುಂದಿನ ವರ್ಗಾವರ್ಗಿ ಗಳಲ್ಲಿ ಪರಿಹಾರ ಕೊಡ ಬಹುದ.’
‘ಗಂಡಸು ಮೇಷ್ಟರುಗಳು ಹೇಗಾದರೂ ಕಷ್ಟ ಅನುಭವಿಸುತ್ತಾರೆ ಸಾರ್ ! ಪಾಪ ! ಆ ಹೆಣ್ಣು ಮೇಷ್ಟರುಗಳನ್ನು ಗೋಳು ಹೊಯ್ದು ಕೊಂಡರೆ ಅವರೇನು ಮಾಡುತ್ತಾರೆ ! ನೋಡಿ ! ಈ ಊರಿನ ಗರ್ಲ್ಸ್ ಸ್ಕೂಲಿನಲ್ಲಿ ತಿಮ್ಮಮ್ಮ ಎಂಬಾಕೆ ಇದ್ದಳು. ನಾಲ್ಕೈದು ಜನ ಮಕ್ಕಳು, ಸ್ಥಳದವಳು. ನಿಮ್ಮ ಇಲಾಖೆಯವರು ಕೊಡುವ ಸಂಬಳದಲ್ಲಿ ಹೇಗೋ
ಕಾಲ ತಳ್ಳುತ್ತಿದ್ದಳು. ಆಕೆಯನ್ನು ತೆಗೆದುಕೊಂಡು ಹೋಗಿ ದೂರ ಪ್ರಾಂತಕ್ಕೆ- ಈ ರೇಂಜೆ ತಪ್ಪಿಸಿ-ವರ್ಗ ಮಾಡಿದ್ದಾರೆ ! ಬಹಳ ಅನ್ಯಾಯ ಸಾರ್.!
‘ಆಕೆಯ ಗಂಡನೋ ಅಣ್ಣ ತಮ್ಮಂದಿರೊ ಯಾರಾದರೂ ದೊಡ್ಡ ಸಾಹೇಬರ ಹತ್ತಿರ ಹೋಗಿ ಹೇಳಿಕೊಳ್ಳಲಿ. ಸರಿ ಮಾಡುತ್ತಾರೆ.’
‘ಆಕೆಗೆ ಗಂಡಗಂಡ ಯಾರೂ ಇಲ್ಲ ಸಾರ್!’
‘ಆಕೆ ನಿಮಗೇನಾಗಬೇಕು ? ನಿಮ್ಮ ನೆಂಟರೋ?’
‘ಅಲ್ಲ ಸಾರ್!’
‘ನಿಮ್ಮ ಜನವೋ?’
‘ಅಲ್ಲ ಸಾರ್!’
‘ಮತ್ತೆ? ನನಗೆ ಅರ್ಥವಾಗುವುದಿಲ್ಲ. ಆಕೆ ವಿಚಾರದಲ್ಲಿ ಇಷ್ಟೊಂದು ಮರುಕ ತೋರಿಸುತ್ತಿದ್ದೀರಲ್ಲ!’
‘ಆಕೆಯನ್ನು ನೋಡಿ ಕೊಳ್ಳುವವರು ಯಾರೂ ಇಲ್ಲ ಸಾರ್ ! ಇಲ್ಲಿ ನನ್ನ ಪೋಷಣೆಯಲ್ಲಿ ಆಕೆ ಇದ್ದಳು. ನಾನು ಸಹ ಅಲ್ಪ ಸ್ವಲ್ಪ ಸಹಾಯ ಮಾಡುತ್ತಾ ಇದ್ದೆ. ಯಾರೋ ಪುಂಡರು ಮೇಲಕ್ಕೆ ಅರ್ಜಿ ಬರೆದು ಬಿಟ್ಟರು, ನಿಮ್ಮ ಇಲಾಖೆಯವರು ಕಣ್ಮುಚ್ಚಿ ಕೊಂಡು ಆಕೆಯನ್ನು ದೂರಕ್ಕೆ ವರ್ಗಮಾಡಿ ಬಿಟ್ಟರು. ತಾವು ಆಕೆಯನ್ನು ಪುನಃ ಇಲ್ಲಿಗೇನೆ ವರ್ಗಮಾಡಿಸಿಕೊಡಬೇಕು, ನನಗೂ ದೊಡ್ಡ ಉಪಕಾರವಾಗುತ್ತದೆ.’
‘ಒಳ್ಳೆಯದು ಚೆನ್ನಪ್ಪ ನವರೇ ! ರಿಕಾರ್ಡುಗಳನ್ನು ನೋಡಿ ಆಲೋಚನೆ ಮಾಡುತ್ತೇನೆ.’
‘ಕರಿಯಪ್ಪ ನವರು ತಮಗೆ ಖುದ್ದಾಗಿ ಹೇಳಬೇಕೆಂದು ತಿಳಿಸಿದ್ದಾರೆ ಸಾರ್ !’
‘ಒಳ್ಳೆಯದು, ಇರಲಿ. ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ.’
‘ಪುನಃ ತಮ್ಮನ್ನು ಬಂದು ಕಾಣಲೇ ?’
‘ಕಾಣುವುದೇನೂ ಬೇಡ. ಬೇಕಾಗಿದ್ದಲ್ಲಿ ನಾನೇ ಹೇಳಿ ಕಳಿಸುತ್ತೇನೆ.’
ಚೆನ್ನಪ್ಪ ನಮಸ್ಕಾರ ಮಾಡಿ ಹೊರಟುಹೋದನು. ರಂಗಣ್ಣನಿಗೆ ಆ ಪ್ರಕರಣ ಅರ್ಧಮರ್ಧವಾಗಿ ಅರ್ಥವಾಯಿತು. ಕೂಲಂಕಷವಾಗಿ ತಿಳಿದುಕೊಳ್ಳೋಣವೆಂದು ಶಂಕರಪ್ಪನನ್ನು ಕರೆದು ಆ ರಿಕಾರ್ಡನ್ನು ತರಿಸಿದನು. ಶಂಕರಪ್ಪ, ‘ಅದು ದೊಡ್ಡ ರಿಕಾರ್ಡು ಸ್ವಾಮಿ! ಬಹಳ ಗಲಾಟೆಗೆ ಬಂದದ್ದರಿಂದ ಆಕೆಗೆ ವರ್ಗವಾಗಿ ಹೋಯಿತು’ ಎಂದು ಹೇಳಿದನು.
‘ಚೆನ್ನಪ್ಪನವರಿಗೂ ಆಕೆಗೂ ಏನು ಸಂಬಂಧ?’
‘ಏನು ಸಂಬಂಧ ಎಂದು ಹೇಳಲಿ ಸ್ವಾಮಿ ! ಸ್ವಾಮಿಯವರಿಗೆ ತಿಳಿಯದೇ ! ಈತನೇ ಆಕೆಯನ್ನು ಇಟ್ಟು ಕೊಂಡಿದ್ದವನು, ಆ ಮಕ್ಕಳೆಲ್ಲ ಇವನದೇ, ಹಿಂದೆ ಒಂದು ಸಾರಿ ದೊಡ್ಡ ಸಾಹೇಬರು ಅಕಸ್ಮಾತಾಗಿ ಸ್ಕೂಲಿಗೆ ಭೇಟಿ ಕೊಟ್ಟರು. ಆಗ ಸ್ಕೂಲಿನಲ್ಲೇ ಆ ಮಕ್ಕಳೆಲ್ಲ ಇದ್ದುವು. ಕೈ ಕೂಸನ್ನು ಕಟ್ಟಿಕೊಂಡು ಆಕೆ ಅಲ್ಲಿದ್ದಳು! ಸಾಹೇಬರಿಗೆ ಬಹಳ ಅಸಮಾಧಾನವಾಯಿತು. ಕಡೆಗೆ ಬಹಳ ಧೈರ್ಯಮಾಡಿ ಆಕೆಯನ್ನು ಇಲ್ಲಿಂದ ವರ್ಗಮಾಡಿಬಿಟ್ಟರು.’
‘ಪುನಃ ಇಲ್ಲಿಗೆ ವರ್ಗ ಮಾಡಿಸಿಕೊಡಬೇಕೆಂದು ಕೇಳುತ್ತಿದ್ದಾನಲ್ಲ ಆ ಮನುಷ್ಯ ! ಜೊತೆಗೆ ಕರಿಯಪ್ಪನವರ ಶಿಫಾರಸು ಪತ್ರ ಬೇರೆ ತಂದು ಕೊಟ್ಟದ್ದಾನೆ! ಒಳ್ಳೆಯ ಜನ!’
ಈ ಮಾತುಗಳು ಮುಗಿಯುವ ಹೊತ್ತಿಗೆ ಸಾಹೇಬರ ಗುಮಾಸ್ತೆ ನಾರಾಯಣ ರಾವ್ ಬಂದನು. ಕಚೇರಿಯ ಲೆಕ್ಕ ಪತ್ರಗಳ ತನಿಖೆಗಾಗಿ ಆತ ಒಂದು ದಿನ ಮುಂಚಿತವಾಗಿ ಬಂದನು. ಆತನ ಹಾಸಿಗೆಯನ್ನು ಕಚೇರಿಯ ಒಂದು ಕೋಣೆಯಲ್ಲಿಡಿಸಿದ್ದಾಯಿತು. ಸಾಹೇಬರು ಮರು ದಿನ ಹನ್ನೊಂದು ಗಂಟೆಯೊಳಗಾಗಿ ಬರುವರೆಂದೂ ಬಂಗಲೆಯಲ್ಲಿ ಅವರಿಗೆ ಸ್ಥಳವನ್ನು ಗೊತ್ತು ಮಾಡ ಬೇಕೆಂದೂ ಆತನು ತಿಳಿಸಿದನು. ಬಂದ ಗುಮಾಸ್ತೆಗೆ ಉಪಾಹಾರಕ್ಕೆ ರಂಗಣ್ಣ ಏರ್ಪಾಟು ಮಾಡಿ ಸ್ನಾನ ಮತ್ತು ಊಟಗಳಿಗೆ ತನ್ನ ಮನೆಗೆ ಬರಬಹುದೆಂದೂ, ಸಾಹೇಬರ ಬಿಡಾರ ದಲ್ಲಿಯೇ ಊಟವನ್ನು ಮಾಡುವುದಾದರೆ ಅದು ಸಹ ಆಗಬಹುದೆಂದೂ ಹೇಳಿದನು.
‘ನಾನು ಹೋಟಲಿಗೆ ಊಟಕ್ಕೆ ಹೋಗುತ್ತೇನೆ ಸಾರ್! ಸಾಹೇಬರ ಬಿಡಾರದಲ್ಲಿ ನಮಗೆಲ್ಲ ಊಟದ ವ್ಯವಸ್ಥೆಯಿಲ್ಲ.’
‘ನೀವು ಕಚೇರಿಯ ತನಿಖೆಗೆ ಬಂದಿರುತ್ತೀರಿ. ಆದ್ದರಿಂದ ನಾನು ಬಲಾತ್ಕಾರ ಮಾಡಿದರೆ ಚೆನ್ನಾಗಿರಲಾರದು, ಹೋಟಲಿಗೆ ಬೇಕಾಗಿದ್ದರೆ ಹೋಗ ಬಹುದು. ಆದರೆ ನಿಮಗೆ ಬರುವ ಭತ್ಯದಲ್ಲಿ ನಿಮ್ಮ ದಿನದ ಖರ್ಚು ಏಳುತ್ತದೆಯೆ?’
‘ಸಾಕಾಗುವುದಿಲ್ಲ ಸಾರ್! ಏನು ಮಾಡುವುದು? ಕೈಯಿಂದ ಕತ್ತರಿಸುತ್ತದೆ ; ದಂಡ ತೆರಬೇಕು’
‘ಆ ಕಷ್ಟವನ್ನು ನಾನು ಬಲ್ಲೆ ಆದ್ದರಿಂದಲೇ ನಾನು ನಿಮಗೆ ಹೇಳಿದ್ದು, ನಿಮ್ಮ ಮನಸ್ಸು ಬಂದ ಹಾಗೆ ತನಿಖೆ ಮಾಡಬಹುದು. ನಿಮ್ಮ ಮನಸ್ಸು ಬಂದ ಹಾಗೆ ವರದಿಯನ್ನು ಬರೆಯಬಹುದು. ನನ್ನ ಆಕ್ಷೇಪಣೆ ಇಲ್ಲ. ನನ್ನ ಮನೆಯಲ್ಲಿ ಊಟಮಾಡಿದ ಕಾರಣದಿಂದ ಯಾವುದೊಂದು ದಾಕ್ಷಿಣ್ಯಕ್ಕೂ ಒಳಗಾಗಬೇಕಾಗಿಲ್ಲ.’
‘ನೀವು ಹೇಳುವುದು ಸರಿ ಸಾರ್ ! ಆದರೆ ಈಗಿನ ಸಾಹೇಬರು ಸ್ವಲ್ಪ ಜೋರಿನಮೇಲಿದ್ದಾರೆ. ನಮಗೆಲ್ಲ ತಾಕೀತು ಮಾಡಿದ್ದಾರೆ.
ಆದ್ದರಿಂದ ಕ್ಷಮಿಸಬೇಕು.’
‘ಒಳ್ಳೆಯದು.’
*****