೧
ಸೆಟ್ಟಿಯ ಮನೆ ಸುಲಿಗೆಯಾಯ್ತು,
ಮನೆಯಲಿದ್ದುದೆಲ್ಲ ಹೊಯ್ತು,
ಬಡಿದುಕೊಂಡು ಅತ್ತ ಸೆಟ್ಟಿ
ಬಾಯ್ಗೆ ಡೊಳ್ಳಿಗೆ;
ನಡೆದನಂದೆ ನಗರ ಬಿಟ್ಟು
ತನ್ನ ಹಳ್ಳಿಗೆ.
೨
‘ಬಸ್ಸು’ಗಳಲಿ ಅಂದು ಜಿದ್ದು;
ಸೆಟ್ಟಿ ಬರಲು ತಟ್ಟನೆದ್ದು
ಓಡಿ ಬಳಿಗೆ ಬಂದನೊಬ್ಬ
ಬಸ್ಸೆಜಂಟನು-
ಕಾಡಿ ಕಾಡಿ ಕೊನೆಗೆ ಸೆಳೆದ
ಕೈಯ ಗಂಟನು.
೩
ಐದಾಣೆಯ ದರವು ಗೊತ್ತು !
ಸೆಟ್ಟಿ ಯಂದು ಅರ್ಧ ತೆತ್ತು,
ಹತ್ತು ಬಿಲ್ಲಿ ಉಳಿದುವೆಂದು
ಹಿಗ್ಗ ತಳೆದನು ;
ಕಳೆದ ಹಣದ ವ್ಯಧೆಯ ಗಳಿಗೆ
ಮರೆತೆ ಕುಳಿತನು.
*****