ಹೊಸಕಾಲದ ಕವಿಯೊಬ್ಬನೆ ನಾನು!
ಹೊಸೆಯುವೆನೆಂತಹ ಕವನಗಳನ್ನು!
೧
ಪ್ರತಿಭಾದೇವಿಯ ದಯೆ ಬೇಕಿಲ್ಲ ;
ಅವಳಿಗೆ ಮಣಿಯುವ ಕವಿ ನಾನಲ್ಲ !
ಎಡಗೈಯಲಿ ನಿಂತಿಹಳಾ ಹುಡುಗಿ,
ನನ್ನ ನೋಡಿದರೆ ಅವಳೆದೆ ನಡುಗಿ-
ಚಳಿಯುರಿಯಲಿ ಗದಗುಟ್ಟುವಳು ;
ಉಳಿದವರಿಗೆ ದೊಡ್ಡವಳವಳು !
೨
ಮಳೆಗಾಲದ ಕಾಲುವೆನೀರಂತೆ
ಗಾಯಗೊಂಡ ಮೈನೆತ್ತರಿನಂತೆ
ಹಿಂಗದೆ ಹರಿವುದು ನನ್ನಯ ಭಾವ;
ತಳಮಳಗೊಳಿಪುದು ರಸಿಕರ ಜೀವ-
ಬತ್ತಲೆ ಹೆಣ್ಣಿನ ಚೆಲುವಿನೊಲು,
ನನ್ನ ಬಿಚ್ಚುನುಡಿಗಳ ಹುರುಳು!
೩
ಕಾವ್ಯೋನ್ಮಾದವು ಮೆದುಳಲಿ ಸೇರಿ,
ಫೌಂಟನ್‌ಪೆನ್ನಿನ ಕುದುರೆಯನೇರಿ,
ಸುತ್ತಿಬರುವೆ ನಾ ಸೃಷ್ಟಿಯ ತುಂಬಾ ;
ದಣಿದ ಕುದುರೆಯಾ ಬಾಯ್ ನೊರೆಯೆಂಬಾ
ಪೆನ್ನಿನ ಮಸಿ ಎಲ್ಲೆಡೆ ಸುರಿದು,
ವಿಶ್ವವನೇ ಮಾಡಿತು ಕರಿದು.
೪
ನನ್ನ ಕವನಗಳ ತೆಗಳುವರಲ್ಲವೆ?
ನನ್ನ ಕವನಗಳ ಹೊಗಳುವರಿಲ್ಲವೆ?
ತೆಗಳ್ವವರಿಗೆ ಕಾಲ್‌ಚೆಪ್ಪಲಿಯೇಟು !
ಹೊಗಳ್ಳವರಿಗೆ ಮೆಚ್ಚೆನ್ನಯ ಹ್ಯಾಟು !
ಬನ್ನಿರಿ, ಬನ್ನಿರಿ ಮುಂದೆ ;
ತೆಗಳುವ ಗಂಡೆದೆ ಯಾರಿಗಿದೆ ?
* * *
ಹೊಸಕಾಲದ ಕವಿಯೊಬ್ಬನೆ ನಾನು !
ಹೊಸೆದೊಗೆವೆನು ನೂರ್ ಕವಿತೆಗಳನ್ನು !
*****