ನಿನ್ನನರಿಯುವ ಅರಿವ ಚೆನ್ನ ನನಗೀಯುವುದು,
ನನ್ನ ಈ ಬಯಕೆಯನು ಹಣ್ಣಿಸೈ ನೀನೊಲಿದು !
೧
ಹೆರರು ತನ್ನವರೆಂಬ ಅರಿಕೆ ನಸುವಿಲ್ಲದೆಯೆ
ನೆರೆದಿರುವ ಗರತಿಯರ ನೆರವಿಯನು ಕಡೆಗಣಿಸಿ,
ತೊರೆದ ಮೊಲೆವಾಲುಣಿಸಿ ಹೊರೆಯುವಾ ತಾಯನ್ನು
ಮರೆಯದೇ ಗುರುತಿಸುವ ಕಿರಿಯ ತರಳನ ತೆರದಿ-
ನಿನ್ನನರಿಯುವ ಅರಿವ
ಚೆನ್ನ ನನಗೀಯುವುದು !
೨
ಚೆಲು-ಚೆಲುವ ಅಲರುಗಳು ಇಳೆಯೊಳಗೆ ಬಹಳಿರಲು
ಅಲರುಣಿಯು ಹುರುಳಿರದ ಅಲರುಗಳನುಳಿದುಳಿದು
ಉಲಿದಾಡಿ ಹಾರಾಡಿ ನಲಿಯುತಿರುವಾಗಲೇ
ಬಲುಬಂಡ ತಳೆದಿರುವ ಅಲರುಗಳ ತಿಳಿವಂತೆ-
ನರಿರಿಯುವ ಅರಿವ
ಚೆನ್ನ ನನಗೀಯುವುದು !
೩
ಸಾಕಿದವನೆನ್ನದೇ ನೂಕುತಿರಿಯುವ ತುಂಟ
ಆಕಳೊಲು ನನ್ನ ಬಗೆ ಕಾಕುತನವನು ತಳೆದು,
ಬೇಕುಬೇಕಾದಂತೆ ಅಲೆಯುತಿದೆ ಅದನಿಂದು
ಜೋಕೆಯಲಿ ಒಂದೆಡೆಗೆ ಬಿಗಿಯಲಿಕೆ ಬರುವಂತೆ
ನಿನ್ನನರಿಯುವ ಅರಿವ
ಚೆನ್ನ, ನನಗೀಯುವುದು!
೪
ಕಂಪ ಕಾಣುವ, ಮೂಗನಿಂಪನರಿಯುವ ಕಿವಿಯ,
ಸೊಂಪ ನೋಡುವ ಕಣ್ಣ, ತಂಪ ತಿಳಿಯುವ ತೊವಲ,
ಕೊಂಪೆಯೊಳು ಹಾಕು ಇವು ಬೇಡಬೇಡವೊ ಸಾಕು,
ಪೆಂಪಿಗನೆ ನಾನಿನ್ನ ತಿಳಿಯುವುದದೇ ಬೇಕು !
ನಿನ್ನನರಿಯುವ ಅರಿವ
ಚೆನ್ನ ನನಗೀಯುವುದು !
*****