ಎಲ್ಲೆಲ್ಲಿಯೂ ಮನದ ಮಾತುಗಳೆ ಮುಂಬರಿದು
ಎದೆಯ ಕೊಳಲುಲಿಯನೇ ಕೇಳಗೊಡವು !
ಹಗಲೆಲ್ಲವೂ ಜಿನುಗುತಿಹುದೆ ಮನಸಿನ ವಾಯ,
ತೆಗೆವುದೊಂದೊಂದು ಸಲ ಎದೆಯು ಬಾಯ ;
ಎಣಿಕೆಯಿಲ್ಲದೆ ಬಣಗುನುಡಿಯ ಹೆಣೆವುದು ಮನಸು,
ಎದೆಯದೊಂದೇ ಒಂದು ಪದವೆ ಸವಿಗನಸು !
ಕಾಗೆ- ಗೂಗೆಗಳ ಕೂಗಾಟ- ಕಿರುಚಾಟದಲಿ
ರಾಗಿಸುವ ವೀಣೆಯುಲಿ ಅಡಗಿರುವುದು ;
ನೆರೆದ ಮಂದಿಯ ಬೀದಿಗಲಹದಾ ಕಲಕಲದಿ
ತಾಯ ಜೋಗುಳವಾಡು ಹುದುಗಿರುವುದು.
ಸೂಳೆಯರ ಸಂಗೀತ ಗಟ್ಟಿಗೊಂಡಿಡಿದಿರಲು
ತಿಂಗಳಿನ ಮೌನಗಾನವು ಹೋಯ್ತು ಹೂತು ;
ಡೋಳು- ಹರೆ-ಕೊಂಬುಗಳ ಬಿರುದನಿಯು ಕಿವಿದುಂಬಿ
ಬಾಲಕನ ಲಲ್ಲೆನುಡಿ ಹೋಯ್ತು, ಬೀತು !
ಸಿಡಿಲು- ಮಿಂಚುಗಳ ಗುಡುಗಾಟ ಮರೆಮಾಡಿಹುದು.
ಮಡದಿಯಾ ಮೆಲುನುಡಿಯ ಪ್ರಣಯದಾಟ ;
ಮೊರೆದು ಭೋರ್‍ಗರೆವ ಕಡಲಲಿ ಹುದುಗಿಕೊಂಡಿಹುದು
ನೊರೆವಾಲಿನೊಂದು ಕಿರಿಯೊರತೆಯಕಟ !
ಬನದರಳ ಕಂಪ ತೊಂಗಲನು ತಳೆದಿರುವೆಲರು
ಸುಳಿಯುತಿರೆ ಪಾರಿಜಾತಕದ ಮೆಲುಗಂಪು
ನಡುನಡುವೆ ತಲೆದೋರಿ ತಡೆದು ತಣಿವಿತ್ತಂತೆ
ನುಡಿಯು ಒಂದೊಂದು ಸಲ ಕೇಳಿಸುವುದಿಂಪು !
ಕೊಳೆಯ ನೆಲೆವೀಡಾದ ಒಡಲಿನೊಳಗನು ಮರೆದು,
ಚೆಲುವನೇ ಕಣ್ಣುಗಳು ಮೆಚ್ಚುವಂತೆ …
ಬಲೆಬಲೆಯ ನುಡಿಯುಳಿದು ರಸಿಕ ಕಬ್ಬದ ಜೀವ-
ಕಳೆಯನೇ ಕಂಡುಂಡು ಹೆಚ್ಚುವಂತೆ-
ಮನದ ಮಾತಿನೊಳು ಮರೆಗೊಂಡಿರುವ ಎದೆಯುಲಿಯು
ಅನುದಿನವು ಕೇಳುತಿರುವೊಲು ಕಿವಿಯನು …
ಅಣಿಗೊಳಿಪೆನೆಂತೆನುತ ನೆನೆವೆನಾವಾಗಲೂ
ಮನದ ಮಾತಿಗೆ ಕೊನೆಯೆ ಇಲ್ಲವೇನು ?
*****