ಏನೇ ತಲೆಗೂ ಮೀಸೆಗೂ
ಬಣ್ಣ ಹಚ್ಚಿಕೊಂಡರೂ|
ಒಳ ಮನಸ್ಸೇಳುತಿದೆ
ದೇಹಕೆ ವಯಸ್ಸಾಗಿದೆ ಎಂದು!
ಆದರೂ ಹೇಳದೆ ಕೇಳದೆ
ನಡೆದಿದೆ ಒಂದೇ ಸಮನೆ
ಒಪ್ಪದ ಮನಸನು
ಒಪ್ಪಿಸುವ ಕಾರ್‍ಯವಿಂದು ||
ಯಾಕೋ ಎಲ್ಲಾ ಟೀನೇಜು
ಹುಡುಗ ಹುಡುಗಿಯರಿಂದ
ಅಂಕಲ್ ಎಂದು ಕರೆಸಿಕೊಳ್ಳಲು
ಎಲ್ಲಾ ನನ್ನ ವಯಸ್ಸಿನವರಂತೆ
ನನಗೂ ಮುಜುಗರವಾಗುತ್ತದೆ|
ನಾನು ಎಲ್ಲರಿಗಿಂತ
ಯ್ಯಂಗಾಗಿ ಕಾಣಬೇಕೆಂಬ
ನನ್ನ ಹೆಂಡತಿಯ ತುಸು ಆಸೆಗೆ
ರಂಗು ತುಂಬುತಲಿದೆ|
ಅವಳಿಗೇ ಚೆನ್ನಾಗಿಗೊತ್ತು
ಈಗ ನನ್ನ ಏಜು ಎಷ್ಟಾಗಿದೆ ಎಂದು||
ಇರುವ ಸತ್ಯವನ್ನು ಎಷ್ಟುದಿವಸ
ಬಣ್ಣಗಳಿಂದ ಮುಚ್ಚಿಡಲು ಸಾಧ್ಯ|
ಬಿ. ಪಿ, ಶ್ಯುಗರು ಬಂದಮೇಲೂ
ನಾನು ನವತರುಣನಂತೆ
ಕಾಣುವುದು ಅಸಾಧ್ಯ? |
ದೂರ ದೃಷ್ಟಿ, ಸಮೀಪ ದೃಷ್ಟಿ
ಎರಡು ಹೋಗಿ,
ಮುಖದ ತುಂಬೆಲ್ಲಾ ಬೈಪೋಕಲ್
ಕನ್ನಡಕ ತುಂಬಿದ ಮೇಲು…
ನಾನು ಯುವರಾಜನಂತೆ ಕಾಣಲು
ಸಾಧ್ಯಾ ಸಾಧ್ಯತೆ ಇದೆಯೇ? ||
ಏನೂ ಕೆಲಸವಿಲ್ಲದ ನನಗೆ
ಈ ಕೆಲಸ ನಾಜೂಕೆನಿಸಿದೆ|
ನನಗೂ ಬಣ್ಣ ಹಚ್ಚಿದ ಮೇಲೆ
ಏನೋ ಹೊಸಾ ಹುಮ್ಮಸ್ಸು ಬಂದಂತಿದೆ|
ಒಂದು ರೀತಿ ಕಿತ್ತುಹೋದ ಹಳೆಯ ರಸ್ತೆಗೆ
ಡಾಂಬರೀಕರಣವಾದಂತಿದೆ ||
*****