ಮಿಂಚಿ ಚಕಮಕ, ಬಾಗಿ ತೂಗುತ ಮಣಿದು ಬಳಕುತ ತಡೆದಿದೆ
ಕಾಮಬೆಟ್ಟದ ಪಚ್ಚೆ ಹೃದಯದಿ ಏನು ನುಸುಳುತ ನಡೆದಿದೆ
ನಯನ ನಿಗಿನಿಗಿ ಎದೆಯ ದೃಢಪಡೆ ಏನೊ ನಾತವ ಹಿಡಿದಿದೆ
ಕಳ್ಳಹೆಜ್ಜೆಯ ಮೆಲ್ಲನಡಿಗೆಯ ಘಾತಸಂಭ್ರಮ ಪಡೆದಿದೆ
ಎಲೆಯ ಸಂದಿಗಳಿಂದ ಜಳಕನೆ ಹರಿದ ಮರ್ಮರ ಗಾಳಿಯೆ
ಮೊದಲೆ ನಿರ್ದಯವಾದ ಅದ್ಭುತ ಮತ್ತೆ ಕೆರಳಿದರೆಂತೆನೆ
ಉಸಿರನಡಗಿಸಿ ಭಯದಿ ನಡುಗುತ ಕಾಣ ಕಾಣುತ ಜಾರಿದೆ
ಮಹಾಮೃಗವಗೊ ಹೇಗೆ ಸಾಗಿದೆ ಬಾಗಿ ನಯಭಯಮಯದಲಿ
ಸೌಮ್ಯ ಸೌಂದರ್ಯವನ್ನು ನಶಿಸಲು ರೌದ್ರ ಸುಂದರ ನಯದಲಿ.
ಮುಗ್ಧ ಮೃಗವಧು ತನ್ನ ಕಾಲಿಲೆ ಮರಣವಿದ್ದೆಡೆ ಸಾಗಿದೆ
ಬನದ ತಣ್ನೆಳಲಲ್ಲಿ ತಿಳಿಗೊಳದಲ್ಲಿ ನಿರ್ಭಯ ಬಾಗಿದೆ
ಪಾಪ, ಸಂಶಯವೆಂಬುದೇ ಗೊತ್ತಿಲ್ಲ ನಂಬುಗೆ-ಜೀವಕೆ
ಆಚೆ-ಈಚೆಗೆ ನೋಡದೇ ನಾಲಗೆಯ ಚಾಚಿರೆ ತೇವಕೆ
ಹಾರಿ ಜಿಗಿದಿತು ಮೇಲೆ ಒಗೆದಿತು ಹುಲಿಯು ಹುಲ್ಲೆಯ ಹೀರಿತು
ಅಯ್ಯೋ ಬಿದ್ದಿತು, ಭಕ್ಷವಾಯಿತು, ಆಯಿತೋ ಬಾಳಾಯಿತು,
ಗಹನ ಗುಹೆಯಲ್ಲಿ ಒಂಟಿ ಇಹ ಸಖನನ್ನೆ ನೆನೆಯುತ ತೀರಿತು
ಅದೇ ಸುಖದಲಿ ಮೃತ್ಯುಮುಖದಲಿ ಹುಲ್ಲೆ ಓ ಹಾಳಾಯಿತು
ಹಾರಿ ಜಪ್ಪಿಸಿ ಕೊಲುವ ಕೌಶಲವಿರಲಿ ಆರ್ಭಟಿ ಇಂದಿನ
ಆದರೂ ಬಂದೀತು ಎಂದೋ ಹುಲಿಯ ಲಯವಾದೊಂದಿನ.
ನೆಲವ ಲಟಲಟ ಮುರಿಯೆ ಮೆಟ್ಟಿದ ಪೆಡಂಭೂತಗಳೆಲ್ಲಿವೆ?
ನೆರಳ ತಂಗೊಳ ಜಲವ ಕುಡಿದುಳಿದಾವು ಹರಿಣಗಳಿಲ್ಲಿಯೇ!
ಪ್ರಬಲ ಬಲಿಯೇ ತನ್ನ ಬಲಭರಭಾರದಲ್ಲಿಯೆ ಮಡಿವನು
ಬದುಕಿನೊಡೆಯನು ಸತ್ತನೆನಿಸಿದ ಸತ್ಯಸಂತತಿ ಜೀವನು
ಕೊಲ್ಲಬಲ್ಲವ ಮೆಲ್ಲಮೆಲ್ಲನೆ ಮೃತ್ಯು ಪಂಥವ ಹಿಡಿವನು.
*****