ಪೂರ್ವ ನಾರಿಯು ರವಿಗೆ ಆರತಿ ಬೆಳಗಿ ನಿಂದಿಹ ಚಲುವದೊ
ಕೆಂಪು ಸೀರೆಗೆ ಚಿನ್ನದೆಳೆಗಳ ಬಣ್ಣ ಬಣ್ಣದ ಒಡಲದೊ
ಕಾಳರಾತ್ರಿಯ ಜೈಸಿ ರಕ್ತದಿ ಮೈಯ ತೊಳೆಯುತ ಬಹನದೊ
ಬೆಂಕಿಯುಂಡೆಯೊ ಎನುವ ಕಾಂತಿಯ ಸೂಸಿ ನೇಸರ ಬರವದೊ.
ನಿಂದ ಸಂಧ್ಯಾರಾಣಿಯಪ್ಪಿದ ಚೆಲುವ ಕಿರಣದ ಕರದಲಿ
ಮುನಿದ ಕಮಲಿನಿಗಿತ್ತು ಮುತ್ತನು ನಲಿಸಿ ನಗಿಸಿದ ಒಲವಿಲಿ.
ವಿಹಗ ಗಾಯನದಿಂದ ಸ್ವಾಗತವಿತ್ತು ಕರೆವುವು ಮುದದಲಿ
ವೇದಘೋಷದಿ ಪೂಜಿಸುವ ಜಗವನ್ನು ನೋಡುವ ನಗುತಲಿ.
ತಳಿರು ಪೂ ಪಣ್ಗಾಯಿಯರ್ಪಿಸಿ ಗಿಡಮರಂಗಳು ಕರೆವುವು.
ಪಾಲ್ಗರೆದು ಕ್ಷೀರಾಭಿಷೇಕದಿ ಸುರಭಿಗಣ ಮೈದೋಳವುವು.
ಹಿಂದೆ ಬಂದನು ಬಂದು ಹೋದನು ಇನ್ನು ಬಾರನು ಎನ್ನುವ
ಜಗಕೆ ಅಭಯವ ನೀಡಿ ಬರುತಿರೆ ಪೂಜೆಗಯ್ವರು ನವನವ.
ಸೂರ್ಯದರ್ಶನ ಮಾಡಿ ಶಾಂತಿಯ ಪೊಂದಿ ಚಂದ್ರಮ ಮರೆಯಲಿ
ನಗವನಿಳಿದನು ಕಾಣದಾದನು ಉಡುಗಣಂಗಳ ಜೊತಯಲಿ.
ಶಬ್ದವಡಗಿದ ಜಗವ ಮುಟ್ಟುವ ಕಿರಣಕರಗಳ ನೀಡುತ
ಒಪು ಮೂಡಿತು ಕಪ್ಪು ಬಾಡಿತು ತಪ್ಪು ಸಡಲಿತು ಮರೆಯುತ.
ರಾಣಿಯರು ಸಿಂಗರಿಸಿ ಮಕುಟವನಿರಿಸಿ ಕೂರಿಸಿ ರಥದಲಿ
ಕಳುಹಿದರು ಸಂಪ್ರೀತಿಯಿಂದಲಿ ಜಗದ ಯಾತ್ರೆಗೆ ಮುದದಲಿ.
ಒಲಿದು ಬಂದನು ಹಸುರನೆರಚುತ ಬೆಳೆವ ಸೂರ್ಯನು ನಭದಲಿ
ಒರೆಸಿ ಮಬ್ಬನು ಜ್ಞಾನ ಜ್ಯೋತಿಯನೂಡಿ ಸರ್ವರ ಮನದಲಿ.
*****