ಕಾನಡಾ
೧
ಒಡೆಯ ನಿನ್ನಡಿಯೆಡೆಯ ಹುಡುಕುತಲಿ ನಡೆದಿಹೆನು,
ಅಡಿಗಡಿಗೆ ದಾರಿಯೊಳು ತಡೆವಡೆಯುತಿಹೆ ನಾನು,
ಹಲವು ಮುನಿಗಳು ನುಡಿದ ಹಲವು ಮಾತುಗಳಿಂದೆ
ಅಲುಗಾಡಿ ಮನವು ಉಯ್ಯಲೆಯಾಡುವಂತಿಹೆನು.
೨
ನಿನ್ನೆಡೆಗೆ ಬರುವದಿದೆ ನನ್ನ ಕೋರಿಕೆ ದೊರೆಯೆ,
ನಿನ್ನ ದನಿ ಕೇಳುತಿಹ ಕಡೆಗೆ ಬರಬೇಕೆನುವೆ;
ನನ್ನ ಕಿವಿ ಬಳಿಯೆ ಜನ ಕಲೆತು ಬಲುಬಲು ವಾದ-
ವನ್ನು ಬಳೆಯಿಸಿ ಮರೆಯಿಸುವರು ನಿನ್ನಯ ನಾದ.
೩
ಹಂಬಲಿಸಿ ನಿನ್ನ ಕರೆದಾಗೆಲ್ಲ ಬಳಸಿ ಜನ
ಇಂಬು ಬಿಡದೆಯೆ ನಡುವೆ ತುಂಬಿ ನಿಲುವರು ಚೆನ್ನ!
ನಿನ್ನಡಿಯ ಹುಡಿಗಾಗಿ ಬಾಯಬಿಡುತಿಹ ನಾನು
ಮಣ್ಣ ಹುಡಿಯನೆ ಹೊಂದಿ ಮನದಾಶೆಗುಂದುವೆನು.
೪
ಬಗೆಯೊಳಗೆ ನೂರಾರು ಅಲೆಯೆದ್ದು ಕಲಕಲಿಸಿ
ಬಗೆಬಗೆಯ ಕಡೆಗಳಲ್ಲಿ ತೆರಳಿ ತಿರುಗುತಲಿಹವು;
ಬಗೆಗಾಣೆನಿವನೆಲ್ಲ ಬಿಗಿದು ಕೂಡಿಸಿ ತಂದು
ಜಗದೊಡೆಯ ನಿನ್ನಡಿಗದೆಂತು ನಾ ಸಲಿಸುವುದು?
೫
ನಿನ್ನ ಬಳಿಯಲಿ ಬೇಡಿಕೊಳುವೆನೊಂದೇ ಒಂದು
ನಿನ್ನೊಲುಮೆಗಣ್ಣಿಯಲಿ ಬಂಧಿಸೆನ್ನನು ಬಿಗಿದ!
ಚೆನ್ನಾದ ದಾರಿಯೊಂದನ್ನು ತೋರಿಸಿ ನನ್ನ
ನಿನ್ನಡಿಗಳೆಡೆಯಲ್ಲಿ ಕರೆದುಕೊಳ್ಳುವುದು ಚೆನ್ನ!
*****