ಯಾರಣ್ಣ ನೀ ಬಿಡುಗಣ್ಣನೇ | ಎದೆಗೆಳೆಯ ! ಕುಳಿತಿಹ ತಣ್ಣನೇ
ಮಾನವನ ಕರ್ಮವ ಬಿಮ್ಮನೇ | ಸುಖದುಃಖ ನೋಡುವೆ ಸುಮ್ಮನೇ
ಸಂತಾಪ ಜಾಲಕೆ ಅದರದೇ | ಮರಣಕ್ಕೂ ವಿಧಿಗೂ ಬೆದರದೇ
ಕುರುಡು ಜಗ ಉರುಳುವುದ ಕಾಯುವೆ | ಸಾಕ್ಷಿ ಕಣ್ಣೂ ನೋಯವೇ ?
ಈ ವಕ್ರಚಕ್ರದ ಜೊತೆಗೆ ನಿಃಸಹನಂತೆ ಏತಕೊ ತಿರುಗುವೇ
ಯಾ ಕಲ್ಪ ತವ ಸಂಕಲ್ಪವೋ | ಈ ಹೃದಯ ದುಡಿಸಿದೆ ಸ್ವಲ್ಪವೇ
ನೀ ನಿಲ್ಲದೇನೂ ನಿಲ್ಲದೋ | ಚಿರಕಾಲದಲು ಅನುಭಾವಿಯೋ
ಜಡ ಪ್ರಕೃತಿ ನಿಯಮಿತ ಪ್ರೇರಣೆಯ ಬಿಟ್ಟಿನ್ನು ಜೀವನ ತೊಳೆವೆವು
ಹುಲು ಎದೆಯ ವಾಸನೆ ತೊಳೆವೆವು | ನಿನ್ನಂತೆ ಪರಿಣತಿಗೊಳುವೆವು
ಎಂದಿನಂತೆಯೆ ಹಿಂದಿನಂತೆಯೆ ಪ್ರಕೃತಿರಥವೋ ಸಾಗಲಿ
ತನ್ನ ರತಿಕೃತಿ, ಭಿನ್ನ ಗತಿಸ್ಥಿತಿ, ಅಂಧ ರೀತಿಯೊಳಾಗಲಿ
ಈ ಇಹದ ರಾಗದ್ವೇಷ ಈ ಸುಖದುಃಖ ಜಲಲಿಪಿಮಾನವು
ಏನಿಲ್ಲ ಅರ್ಥವು ವ್ಯರ್ಥವಿದು ಗುರಿಯಿರದ ಜಗ-ಸೋಪಾನವು
ಅಗೊ ಪುರುಷನೋ, ಅದು ಆತ್ಮವೋ, ಆ ಜೀವವೋ ಕಾಯುತಲಿರೆ
ಆಕಾಶವ್ಯೂಹಪರಾಕ್ರಮಕ್ಕದೊ ಕಾಲತತಿ ಸಾಯುತಲಿರೆ
ಶಮದ ಸೀಮೆಯೊಳಚಲವಿರುವೆವು, ನಿಯತಿ ಮರಣವ ನೂಗಲಿ
ನೀನಾರು ಹೇಳೈ ಸಾಕ್ಷಿಯೇ, | ನಾನಾರು ನಿನ್ನೊಡನಾತನು
ಈ ಲೋಕಚಕ್ರವ ಕಾಲದೇಶದಿ ಕಾಂಬ ನಾಮಾತೀತನು ?
*****