ಆ ವಿಳಾಸವಿಲ್ಲದ ಅಲೆಮಾರಿ
ಎಂದಿನಂತೆ ಜನಜಂಗುಳಿಯ
ಮಧ್ಯೆ ಸಿಕ್ಕ.
ಅವನು ಸಿಗುವುದು ಅಲ್ಲೇ
ಆ ಏಕಾಂತದಲ್ಲೇ.
ಅದೇಕೋ ಇಂದು
ನನ್ನ ಕಂಡವನೇ
ತನ್ನ ಜೋಳಿಗೆಗೆ
ಕೈ ಹಾಕಿ ತಡಕಿ
ಲಾಲಿಪಪ್ಪಿನ ಕಡ್ಡಿಯೊಂದನ್ನು
ತೆಗೆದು ಕೈಯಲ್ಲಿ ಹಿಡಿದು
ಮುಂಚಾಚಿ, ನಕ್ಕ.
ಎಂದೂ ಭಿಕ್ಷಕ್ಕೆ ಕೈಯೊಡ್ಡದವಳು
ಮೋಡಿಗೊಳಗಾದವಳಂತೆ ಕಸಿದು
ಬಗಲ ಚೀಲಕ್ಕೆ ಎಸೆದು
ಬಿರಬಿರನೆ ನಡೆದೆ.
ಇನ್ನೂ ಕೊಳ್ಳುವುದಕ್ಕಿತ್ತು
ತೆಂಗು, ತರಕಾರಿ, ಸಂಬಾರ……
ಕೆಲಸ ಬೆಟ್ಟದಷ್ಟಿತ್ತು.
ಆಗಲೇ ತಡವಾಗಿತ್ತು
ಗಂಡ ಮಕ್ಕಳೂ
ಮನೆಯಲ್ಲಿ ಕಾಯುತ್ತಿರಬಹುದು…..
ಮನೆಗೆ ಬಂದು
ಚೀಲ ಸುರುವಿ
ಎಲ್ಲ ವಿಂಗಡಿಸಿಡುವಾಗ
ಹಸಿಮೆಣಸಿನ ಮರೆಯಲ್ಲಿ
ಮೆಲ್ಲನಿಣುಕುತ್ತಿತ್ತು ಲಾಲಿಪಪ್ಪಿನ ಕಡ್ಡಿ!
ಮೇಲಿನದೆಲ್ಲಾ ಹೇರಿಕೆ
ಸರಸರನೆ ಸರಿಸಿ
ಕಡ್ಡಿಯೆಡೆಗೇ ಕೈ ಹೋಗುವುದೇ?
ತಿರುಗಿಸಿ ಮುರುಗಿಸಿ ನೋಡುತ್ತಾ
ಮುಟ್ಟುತ್ತಾ ಮೂಸುತ್ತಾ
ಒಳಗಿನ ಮಗುವೆದ್ದು
ಬೆರಗಿನಲಿ ಆಟವಾಡುತ್ತಿರಲು
ನವಿಲು ಬಣ್ಣದ ಸಿಪ್ಪೆ ಬಿಡಿಸಿದೆ
ಗಾಢ ಗುಲಾಬಿ ಬಣ್ಣದ ಗೋಲಿಗೆ
ಕಡ್ಡಿಸಿಕ್ಕಿಸಿದ್ದಾರೆ ಯಾರೋ
ನೋಡಿದೊಡನೆ ಚಪ್ಪರಿಸಬೇಕೆನಿಸುವ
ಉಮೇದು ಹುಟ್ಟಿಸುವ
ಸುವಾಸನೆ ಮೆತ್ತಿದ್ದಾರೆ ಯಾರೋ
ತಡೆಯಲಾಗದೇ ಬಾಯಿಗಿಟ್ಟುಕೊಂಡೆ
ಲಾಲಿಪಪ್ಪಿನೊಂದಿಗೇ
ಕರಗುತ್ತಾ ಹೋದೆ.
ಆಗಲೇ ಅವನಿಗೊಂದು
ವಂದನೆ ಹೇಳಲೂ ಮರೆತೆನಲ್ಲಾ!
ಛೇ! ಎಲ್ಲಿದ್ದಾನೋ ಹಾಳಾದವನು.
*****