ಸತಿ:-
ತೇಲು ಮೋಡಗಳ
ತೀಡಿ ಮುಡಿಗಟ್ಟಿ
ಮಲ್ಲಿಗೆ ಮುಡಿದು
ಮುಗುಳುನಗೆ ಚೆಲ್ವ
ಮುಗಿಲುಚೆನ್ನೆಯ
ನೋಡಿ ನಗದಿರ್ಪ
ಕವಿಯು ಕವಿಯೇನೆಂಬೆ!
ಚೆನ್ನ ಚಿನ್ಮಯನೆ,
ಚೆಲುನಗೆಯನೊಮ್ಮೆ
ಬೀರು, ಸುಪ್ರಭಾತದ
ಸುಮನ ಸಂಚಯದಂತೆ!
ಕಿರುನೃತ್ಯಗೈಯೊಮ್ಮೆ
ಮಧುವನೀಂಟಿ ಮೈ-
ಮರೆತ ಮರಿದುಂಬಿಯಂತೆ!
ಪತಿ:-
ಕಡಲಿನೊಡಲಿನೊಳು
ನೆಲೆಯ ನಡುವನೆಯಲ್ಲಿ
ಸಿಂಪೆ ಸೆರೆಮನೆಯಲ್ಲಿ
ಸಿಲುಕಿ ಮೌಕ್ತಿಕವು
ಮೊರೆಯಿಡುತಲಿರೆ
ಮನ ಕರಗದಿಹ
ಕವಿಗಾರ್ತಿ ಕಲ್ಬೆಂಬೆ!
ರನ್ನ ಹೃನ್ಮಯಳೆ,
ನೀ ನಗುತಲಿರಬೇಕು
ನಾನಳುತಲಿರಬೇಕು
ಸುಖದುಃಖ ಸಮವಂತೆ!
ಇದನೆ ಜಗಜನಕೆ
ತೋರಿ ಸಾರಲಿಬೇಕು
ಕಡಲು-ಬಾನುಗಳಂತೆ!
*****