ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ
ಅರಿದರಿದು
ಬಿಲುಗಾರನಹೆಯೋ
ಎಸೆದಿಬ್ಬರು ಒಂದನೀ ಹರು ಗಡ
ಇದು ಹೊಸತು
ಚೋದ್ಯವೀ ಸರಳ ಪರಿ ನೋಡಾ
ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು
ನಾವಿಬ್ಬರೊಂದಾಗೆ ಬಿಲ್ಲಾಳಹೆ
ಎಸೆಯಲೋ ಕಾಮ
[ಚೋದ್ಯ-ಆಶ್ಚರ್ಯ, ಹರು – ತೆಗೆದುಕೊ, ಸೆರೆಹಿಡಿ, ಸರಳ ಪರಿ-ಬಾಣದ ಪರಿ]
ಉರಿಲಿಂಗದೇವನ ವಚನ. ಮನ್ಮಥ ಬಲು ದೊಡ್ಡ ಬಿಲ್ಲಾಳು. ನನಗೂ ನನ್ನ ನಲ್ಲನಾದ ದೇವರಿಗೂ ಇಬ್ಬರಿಗೂ ಒಂದೇ ಬಾಣದಲ್ಲಿ ಹೊಡೆಯುವುದಕ್ಕೆ ಸಾಧ್ಯವಾದರೆ ಮಾತ್ರ ನೀನು ನಿಜವಾದ ಬಿಲ್ಲಾಳು. ನಮ್ಮಿಬ್ಬರಿಗೂ ನಾಟುವಂತೆ ಒಂದೇ ಬಾಣವನ್ನು ತೊಟ್ಟು ಎಸೆದರೆ ಆಗ ನಾನೂ ಅವನೂ ಒಂದೇ ಆಗಿಬಿಡುತ್ತೇವೆ. ಆಗ ಮಾತ್ರ ನೀನು ಬಿಲ್ಲಾಳು ಆಗುವೆ ಎಂದು ಉರಿಲಿಂಗದೇವ ಕಾಮನಿಗೆ ಸವಾಲೆಸೆದಿದ್ದಾನೆ.
ಉತ್ಕಟವಾದ ದೈವಭಕ್ತಿಯು ಕಾಮದಷ್ಟೇ ತೀವ್ರವಾದ ಭಾವ, ಇರಬಹುದು. ಆದರೆ ಅದು ಭಕ್ತ / ಭಕ್ತೆಗೆ ಮಾತ್ರ, ಕಣ್ಣಿಗೆ ಕಾಣದ ನಲ್ಲ ದೇವರಿಗೂ ಆ ಭಾವ ಬರಬೇಡವೇ! ಅಂತೆಯೇ ತಪಸ್ಸಿನಲ್ಲಿ ತೊಡಗಿದ್ದ ಶಿವನ ಮೇಲೆ ಬಾಣ ಎಸೆದ ಕಾಮ ನನ್ನನ್ನೂ ನನ್ನ ದೈವವನ್ನೂ ಒಂದಾಗಿಸುವಂತೆ ಬಾಣತೊಡಲಿ ಎಂಬ ಕೋರಿಕೆ. ಹಾಗೆ ಒಂದುವೇಳೆ ಬಾಣ ತೊಟ್ಟರೆ ಕೊನೆಗೆ ಕಾಮನೇ ಸುಟ್ಟುಹೋಗ ಬೇಕಲ್ಲವೇ! ಕಾಮದ ಮೂಲಕವೇ ಕಾಮದ ನಿರಾಕರಣೆಯನ್ನೂ ಮಾಡುವ ಪರಿ ಹೊಸತಾಗಿದೆ.
*****