ಎಲ್ಲಿ ಮರೆಯಾಗಿ ಹೋಗಿವೆ,
ಎಲ್ಲಿ ಅಡಗಿ ಕುಳಿತಿವೆ
ಜೀವನದ ಅರ್ಥವನ್ನು ಗಟ್ಟಿಯಾಗಿಸಿದ,
ನನ್ನ ರೂಪಿಸಿದ ಸಿಹಿಕಹಿ ನೆನಪುಗಳು?
ರಜೆ ಸಿಕ್ಕಿತೆಂದರೆ ಅಜ್ಜಿ ಮನೆಗೋಡುವ ಸಂಭ್ರಮ,
ತುಂಬಿದ ಮನೆಯ ಸಡಗರ;
ನೂರೊಂದು ವರುಷ ಬಾಳಿದ ಪಿಜ್ಜನ ಯಜಮಾನಿಕೆಯ ದರ್ಪ.
ಮನೆಯ ಮುಂದಿನ ದೊಡ್ಡ ಅಂಗಳ;
ಅಂಗಳದ ಬಲಬದಿಯ ಎತ್ತರದ ದಿನ್ನೆಯ ಮೇಲೆ
ಮುಚ್ಚಿಯೇ ಇರುತ್ತಿದ್ದ ಮನೆದೈವದ ಚಿಕ್ಕಗುಡಿ;
ಯಾರಿಗೂ ಪ್ರವೇಶವಿಲ್ಲದ ಮೊಗಸಾಲೆಯ ಮೂಲೆಯ
ದೈವದ ಆಭರಣ ಇಟ್ಟಿದ್ದ ಕತ್ತಲೆ ಕೋಣೆ;
ಕಾಲ್ದೀಪದ ಮಂದ ಬೆಳಕು ಗಾಳಿಗೆ ಅಲ್ಲಾಡಿದಾಗ
ಗೋಡೆಯ ಮೇಲೆ ಮೂಡುತ್ತಿದ್ದ ನೆರಳ ಚಿತ್ರಗಳು.
ಭೂತವೇ ಕುಣಿಯುತ್ತಿದೆ ಎನ್ನುವ ನಮ್ಮ ಭ್ರಮೆ!
ಅದರ ಹಿಂದಿನ ಹೆದರಿಕೆ?
ಎಂದೂ ಖಾಲಿಯಾಗಿರದ
ಅಂಗಳದ ಆಚೆಗಿನ ಬಾಣಂತಿ ಕೋಣೆ;
‘ಕಾಗೆ ಮುಟ್ಟಿದಾಗ’ ಮೂರು ದಿನ
ಮನೆಯ ಹೆಂಗಸರು ವಿರಮಿಸುತ್ತಿದ್ದ ಜಗಲಿ;
ಕೋಣೆಯಷ್ಟೇ ದೊಡ್ಡದಾಗಿದ್ದ ಭತ್ತ ತುಂಬುತ್ತಿದ್ದ ಕಣಜ;
ಮನೆಯಿಂದ ನೂರು ಮಾರು ದೂರದಲ್ಲಿದ್ದ
ಹೊಗೆ ತುಂಬಿರುತ್ತಿದ್ದ ಸ್ನಾನದ ಕೊಟ್ಟಿಗೆ,
ಬಟ್ಟೆ ಒಗೆಯುತ್ತಿದ್ದ ಚಿಕ್ಕ ತೊರೆ,
ಎದುರಿಗೆ ಹಬ್ಬಿದ್ದ ಮಜಲು, ನಡೆದಾಡುತ್ತಿದ್ದ ಕಟ್ಟದ ಪುಣಿ
ಎಲ್ಲಿ ಮರೆಯಾಗಿ ಹೋಗಿವೆ ಈ ಎಲ್ಲ ನೆನಪುಗಳು?
ರವಿಕೆ ತೊಡದೆ ಸೀರೆ ಉಡುತ್ತಿದ್ದ
ಬಚ್ಚ ಬಾಯಿ ಬಿಟ್ಟು ನಗುತ್ತಿದ್ದ
ನನ್ನ ಪಪ್ಪನ ‘ಅಪ್ಪೆ’ ನನ್ನಮ್ಮನ ಪ್ರೀತಿಯ ಮಾಮಿ
ಮೊಮ್ಮಕ್ಕಳಲ್ಲಿ ನಾನೊಬ್ಬಳೇ ನೋಡಿದ್ದ
ನನ್ನಜ್ಜಿಯ ಮಸುಕಾದ ನೆನಪುಗಳು?
ಶನಿವಾರ ಶನಿವಾರ ಮಾತ್ರ ಜೋಳಿಗೆ ಹೊತ್ತು
ನಿಯಮಕ್ಕೆ ಬದ್ಧನಾಗಿ ಭಿಕ್ಷೆ ಬೇಡಲು ಬರುತ್ತಿದ್ದ,
ಅವನನ್ನೇ ಕಾಯುತ್ತಿದ್ದ ನಮಗೆ ಅಕ್ರೋಟು ಕೊಟ್ಟು
ಕಥೆ ಹೇಳಿ ನಗಿಸುತ್ತಿದ್ದ ಕಾಬೂಲಿವಾಲನಂತಿದ್ದ
ಶನಿವಾರದ ಅಜ್ಜನ ನೆನಪುಗಳು?
ದನಗಳಿಗೆ ಹುಲ್ಲು ತರುತ್ತಿದ್ದ, ಹುಲ್ಲಿನ ಮಧ್ಯೆ
ಗೇರುಹಣ್ಣು, ಸುಲಿದ ಹಸಿ ಗೇರುಬೀಜಗಳ ಅಡಗಿಸಿಟ್ಟು
ನಮಗೆ ಪ್ರೀತಿಯಿಂದ ಕೊಡುತ್ತಿದ್ದ,
ಹಿಂದಿನ ಹಿತ್ತಲಿಂದಲೇ ನಮ್ಮ ಜತೆಗೆ ಬೆರೆಯುತ್ತಿದ್ದ
ಮಸಿ ಬಣ್ಣದ ದಿಕ್ಕೊಲು ಬಿಡುಗುವಿನ ನೆನಪುಗಳು?
ಕಕ್ಕಸು ಸ್ವಚ್ಛಗೊಳಿಸಲು ಹೇಸಿಗೆ ಹೊತ್ತು ಬರುತ್ತಿದ್ದ
ದೂರದಿಂದಲೇ ‘ಅಕ್ಕರೇ’ ಎಂದು ಕರೆಯುತ್ತಿದ್ದ ಕೊರಪಳು?
ಅವಳ ಹಿಂದೆ ನಗುತ್ತಾ ಹೆಜ್ಜೆ ಹಾಕುತ್ತಿದ್ದ ಕೊರಗ?
ಪ್ರೀತಿಗೆ ಜಾತಿ ವರ್ಗ ಇಲ್ಲವೆಂದು ಸಾರಿದ
ಇವರೆಲ್ಲರ ನೆನಪುಗಳು?
ತಿಂಗಳಿಗೊಮ್ಮೆ ಅಂಗಳಕ್ಕೆ ಬರುತ್ತಿದ್ದ ಕ್ಷೌರಿಕ ಲಕ್ಷ್ಮಣ
ಪಪ್ಪನ ಕೂದಲು ಕತ್ತರಿಸುತ್ತಾ ಬಿಚ್ಚಿಡುತ್ತಿದ್ದ ಊರ ಸುದ್ದಿ
ಕ್ಷೌರ ಬೇಡವೆಂದು ಎಲ್ಲೆಲ್ಲೋ ಅಡಗಿ, ತಂದೆಯಿಂದ ಏಟು ತಿಂದು
ಕಣ್ಣಲ್ಲಿ ಮೂಗಲ್ಲಿ ನೀರು ಸುರಿಸುತ್ತಾ ತಲೆ ಒಡ್ಡುತ್ತಿದ್ದ ತಮ್ಮಂದಿರ
ಕಥೆ ಹೇಳಿ ನಗಿಸುತ್ತಿದ್ದವನ ನೆನಪುಗಳು?
ವಾರಕ್ಕೊಮ್ಮೆ ಚಾವಡಿಗೆ ಬರುತ್ತಿದ್ದ ರಾಜು ಮಡ್ಕೊಲ
ತಂದೆಯವರ ಬಿಳಿ ಬಟ್ಟೆಯನ್ನು ಗರಿಗರಿಯಾಗಿಸಿ ತರುತ್ತಿದ್ದವ.
ಗೇಟಿನೊಳಗೆ ಬರುತ್ತ ‘ಅಮ್ಮ ಬೇಗ ಬಟ್ಟೆ ಹಾಕಿ’ ಎನ್ನುತ್ತಲೇ
ಅರ್ಧಗಂಟೆ ಕುಳಿತು ನಮ್ಮ ನಗಿಸಿ
ಕೋಸು ಕಣ್ಣಿನಲ್ಲಿ ಆತ್ಮೀಯತೆ ಸೂಸುತ್ತಿದ್ದವನ ನೆನಪುಗಳು?
ಮನೆಯವರೇ ಆಗಿದ್ದ ಡಾಕ್ಟರು ಮಾಮ;
ಮೊಮ್ಮಗನಿಗೆ ಹುಶಾರಿಲ್ಲವೆಂದು ಪಪ್ಪ ಕಣ್ಣಲ್ಲಿ ನೀರು ತುಂಬಿದಾಗ
ಅಮ್ಮನ ಜತೆಯಲ್ಲಿ ಮುನ್ನೂರು ಮೈಲು ಓಡಿಬಂದು
ನನ್ನ ಮಗನ ಉಳಿಸಿಕೊಟ್ಟ, ಪ್ರೀತಿಯಿದ್ದಲ್ಲಿ ದೂರವೇ ಇಲ್ಲ ಎಂದ
ಮರೆಯಲಾಗದ ಮಹಾನುಭಾವನ ನೆನಪುಗಳು?
ನನ್ನ ಸೈಂಟ್ ಸಿಸಿಲಿಸ್ ಶಾಲೆ
ನನ್ನ ಪ್ರೀತಿಯ ಇಜಬೆಲ್ಲ ಸಿಸ್ಟರ್,
ಕಪ್ಪು ನಿಲುವಂಗಿಯೊಳಗೆ ಗುಲಾಬಿಯಂತೆ
ನಗುತ್ತಿದ್ದ ಹೆಡ್ ಮಿಸ್ಟ್ರೆಸ್ ರೋಸ್‌ಮೇರಿ?
ಕನ್ನಡದ ಮೇಲೆ ಪ್ರೀತಿ ಹುಟ್ಟಿಸಿದ್ದ
ನೀಲಿ ಕೋಟಿನ ಕನ್ನಡ ಮೇಸ್ಟ್ರು?
ಕಡ್ಡಾಯವಲ್ಲದ ಹಿಂದಿ ಭಾಷೆಯ ಮೇಲೆ
ಪ್ರೀತಿ ಹುಟ್ಟಿಸಿದ್ದ ಹಿಂದಿ ಮೇಸ್ಟ್ರು?
ನನ್ನ ವಕ್ರ ರೇಖೆಗಳಲ್ಲಿ ಕಲಾವಿದೆಯನ್ನು
ಗುರುತಿಸಿದ್ದ ಡ್ರಾಯಿಂಗ್ ಮೇಷ್ಟ್ರು?
ಎಲ್ಲಿ ಹೋಗಿವೆ ಇವರೆಲ್ಲರ ನೆನಪುಗಳು?
ಆಟದ ಮೈದಾನಿನ ಗಾಳಿಮರದ ಅಡಿಯಲ್ಲಿ ಕುಳಿತು
ಗುಸು ಗುಸು ಮಾತಾಡುತ್ತಿದ್ದ ಗೆಳತಿಯರ ಪಟ್ಟಾಂಗದ ಮಜ;
ಏನೇನೋ ಕಥೆ ಹೇಳುತ್ತಿದ್ದ ಭೂತವಾಸಗಿದ್ದ ಮೂಲೆಯ ಗಾಳಿಮರ;
ಮೆದು ಮಾತಿನ ಬುರ್ಕಾದೊಳಗಿನ ಮೆಹರುನ್ನೀಸ,
ಉಲ್ಲಾಸದ ಬುಗ್ಗೆಯಾಗಿದ್ದ ಬಾಬ್ ಕಟ್ಟಿನ ಜಾನ್ ಶ್ರೇಷ್ಠ;
ಮಾವಿನ ಮರದಿಂದ ಕಾಯಿ ಕದಿಯುತ್ತಿದ್ದ ಗೆಳತಿಯರ ಗುಂಪು;
ಸಿಕ್ಕಿ ಬಿದ್ದು ಸಿಸ್ಟರ್‌ಗಳಿಂದ ತಿನ್ನುತ್ತಿದ್ದ ಬೈಗಳು?
ಎಲ್ಲಿ ಹೋಗಿವೆ ಈ ಎಲ್ಲ ನೆನಪುಗಳು?
ನೆನಪೇ ಆಗದಷ್ಟು ಜೀವನದ ಜಂಜಾಟದಲಿ
ಕೊಚ್ಚಿ ಹೋದೆನೇ ನಾನು? ಇಲ್ಲ. ಈ ನೆನಪುಗಳೆಲ್ಲ ಬೇಕು.
ಪದೇ ಪದೇ ಮೆಲುಕು ಹಾಕಿ ಹಸಿಯಾಗಿಸಬೇಕು.
ಸೊರಗುತ್ತಿರುವ ಜೀವನೋತ್ಸಾಹವನ್ನು ಪುನರುಜೀವಿಸಲು
ಮರೆತ್ತಿದ್ದ ನೆನಪುಗಳ ಕೆದಕಬೇಕು.
ಹಲವಾರು ಒತ್ತಡಗಳಲ್ಲಿ ಸಿಕ್ಕಿ ಜಗ್ಗಿ ಹೋಗುತ್ತಿರುವ
ನನ್ನನ್ನು ನಾನು ಹಿಡಿದು ನಿಲ್ಲಿಸಬೇಕಾದರೆ
ಆ ನೆನಪುಗಳೆಲ್ಲ ನುಗ್ಗಿ ಬರಬೇಕು.
ಇಲ್ಲವಾದರೆ ಕಳೆದು ಹೋದ ನೆನಪುಗಳಂತೆ
ನಾನೂ ಕಳೆದು ಹೋಗುತ್ತೇನೆ ಒಂದು ದಿನ.
ಎಲ್ಲರ ನೆನಪುಗಳಿಂದ ಮಾಯವಾಗುತ್ತೇನೆ.
*****