ಮೇಲೆ ನೋಡಿದರೆ ನೀಲಾಕಾಶ-
ಅಲ್ಲಿ ರವಿ, ಚಂದ್ರ ನಕ್ಷತ್ರಗಳಿದ್ದಂತೆ,
ರಾಹು ಕೇತು ಶನಿಗ್ರಹಗಳೂ ಇವೆ.
ತೊಟ್ಟವಳು ಗಹನ ಗಂಭೀರ!
ಕೆಳಗೆ ನೋಡಿದರೆ ವಿಶಾಲ ಪೃಥ್ವಿ,
ಎಲ್ಲವನು ಹೊತ್ತಿರುವ ಭೂಮಿತಾಯಿ,
ಇಲ್ಲಿ ಚೆಲುವು ಇದ್ದಂತೆ ಕ್ರೌರ್ಯವೂ ಇದೆ.
ಹೊತ್ತವಳು ಕ್ಷಮಯಾ ಧರಿತ್ರಿ!
ನಮ್ಮೊಳಗೆ ಇಣುಕಿದರೆ ನಿಗೂಢ ಅಂತರಾಳ
ಆಕಾಶದ ಗಾಂಭೀರ್ಯವೂ ಅಲ್ಲಿಲ್ಲ
ಭೂಮಿಯ ತಾಳ್ಮೆಯೂ ಅಲ್ಲಿಲ್ಲ.
ಸಮುದ್ರದ ಆಳ ಮಾತ್ರ ಅಲ್ಲಿದೆ.
ಪ್ರೀತಿ ಪ್ರೇಮದ ಭಾವ ಹನಿಗಳಿವೆ
ಕೋಪ ದ್ವೇಷದ ಭೋರ್ಗರೆತವಿದೆ.
ಕೃಷ್ಣನ ಕೊಳಲಿನ ನಾದವೂ ಇದೆ
ತರೆಗಳ ನಲಿವಿನ ನಿನಾದವೂ ಇದೆ.
ಕಡಲಿನ ವಿಸ್ತಾರ ಆಕಾಶದ ಎತ್ತರ,
ಧರಣಿಯ ಸಹನೆ ಅಂತರಾಳದ ಆಳ
ಅಳೆಯಲುಂಟೇ?
*****