ಮಲಿನವಾಗಿದೆ ಪರಿಸರ
ಗಾಳಿ ನೀರು ಭೂಮಿ ಎಲ್ಲ
ಹಾಳುಗೆಟ್ಟಿದ ಪರಿಸರ
ಮನಸ್ಸು ಹೃದಯ ಭಾವ ಎಲ್ಲ.
ಮಲಿನವಾಗಿದೆ ಪರಿಸರ
ಮರೆತು ಹೋಗಿದೆ ಸದ್ಭಾವ
ಮಡುಗಟ್ಟಿ ರಾಡಿಯಾಗಿದೆ
ಮಾನಸ ಸರೋವರ.
ಮಾಯವಾಗಿದೆ ಮಾನವೀಯತೆ
ಅಟ್ಟಹಾಸ ಗೈದಿದೆ ದಾನವೀಯತೆ
ಮರೆಯಾದಾಗ ಜೀವಿಸುವ ಆಸ್ಥೆ
ಎಲ್ಲಿ ಹುಡುಕಲಿ ದೈವೀಯತೆ?
ನ್ಯಾಯವಿಲ್ಲ, ಧರ್ಮವಿಲ್ಲ,
ನೀತಿ ಇಲ್ಲ, ಪ್ರೀತಿ ಇಲ್ಲ
ಗಾಳಿ ಇಲ್ಲ, ನೀರು ಇಲ್ಲ, ಜಾಗವಿಲ್ಲ
ಎಲ್ಲೆಲ್ಲೂ ನಾಶ, ಪರಿಸರ ನಾಶ!
ಯಾರು ತೊಳೆವರು ಈ ಅಸಹ್ಯತೆ
ಉಸಿರುಗಟ್ಟಿಸುವ ಅಪರಿಶುದ್ಧತೆ
ಯಾರು ತರುವರು ಇಲ್ಲಿಗೆ
ಸ್ವಚ್ಛಭಾವ ತನ್ಮಯತೆ?
ನಾವೆ ಜೀವನದ ಹರಿಕಾರರು
ಆಳುವ ಗುರಿಕಾರರು
ನಾವೆ ಪರಿಸರ ರಕ್ಷಿಸುವವರು
ನಾವೆ ಹಾಳುಗೆಡಹುವವರು.
ನಾವಾಗಬೇಕು ಮಾನವರು
ನಿತ್ಯ ನಿರಂತರ ಜೀವಿಸುವ
ಒಲುಮೆ ಉಕ್ಕಿಸುವ ನಿತ್ಯ ಚೇತನರು.
ಆಗಲಾಗದೇ ಆಗ ಪರಿಸರ ಸಂರಕ್ಷಣೆ
ಮಾನವೀಯತೆಯ ರಕ್ಷಣೆ
ಹಾಕಲಾರವೆ ಸ್ಪಚ್ಛ ಭಾವರಾಗಗಳು
ನಿತ್ಯ ಜೀವನ ಪ್ರದಕ್ಷಿಣೆ?
*****