ಏಕೆ ಗೋವರ್ಧನವೆ ಹೆಬ್ಬಾವಿನಂದದಲಿ
ಮಬ್ಬಾಗಿ ಮಲಗಿರುವೆ ಚಿಂತೆಯಲ್ಲಿ
ಮೈಗೆ ಸರಿಯಿರದೇನು? ಏಕೆ ಬಾಡಿಹೆ ಹೇಳು?
ನೋವು ಮೂಡಿದೆ ನಿನ್ನ ಗೆಲುಮೊಗದಲಿ
ಬಾಲ ಗೋಪಾಲಕರ ಕಳೆಯು ತಪ್ಪಿದುದೆಂದು
ನಿಡುಸುಯ್ದು ಸೊಪ್ಪಾಗಿ ಸೊರಗಿರುವೆಯಾ?
ಗೋಸಲೀಲೆಯಕಾಂಬ ಸೌಭಾಗ್ಯವಿಲ್ಲೆಂದು
ಕಣ್ಮುಚ್ಚಿ ದುಗುಡದಲಿ ಒರಗಿರುವೆಯಾ
ಅಂದು ಮಥುರಾನಗರಕಾನಂದ ತಂದವನು
ಗೋವುಗಳ ವರ್ಧಿಸಿದ ಗೋವರ್ಧನ
ಹಳ್ಳಿ ಗೋಕುಲವಾಗಿ ಸೌಭಾಗ್ಯ ಹೊಂದಿತ್ತು
ಸೊಗವುಣಲು ಬಂದಿದ್ದ ಗೋವರ್ಧನ
ಅವನ ಕೊಳಲಿನ ದನಿಗೆ ನಿನ್ನ ಮೈ ಕಿವಿಯಾಯ್ತು
ಅಂದಿನಾ ಸೌಖ್ಯವನ್ನು ಹೇಳು! ಮೌನ
ಮುರಿದು ! ಗಿಡಮರವೆಲ್ಲ ಹುಚ್ಚೆದ್ದು ಕುಣಿದಾವು
ಕೇಳಿ ನೀಬಣ್ಣಿಸುವ ಆ ವಿತಾನ
ಎದೆಯಾಳದಲಿ ಬಿದ್ದ ಆಸೆ ಒಡಮುರಿದೇಳೆ
ಬಾಳು ನಂದನ ರೂಪತಾಳುವಂತೆ
ಹಸುರಿಸುವುದೊಂದೆ ತಡ ನೋಡು ನಿನ್ನಯ ಮೈ ಯು
ಮಥುರೆಯಾಗುವದಣ್ಣ ಮೊದಲಿನಂತೆ
ಗೋವುಗಳು ನಲಿದಾವು ಬಳ್ಳಿಗಳು ಪುದಿದಾವು
ಕಾನನದ ತುಂಬೆಲ್ಲ ಕಾಯಮಾನ
ನಿನ್ನ ಜಾಡ್ಯವು ಕಳೆಯೆ ಗಿರಿಧರನು ಬಂದಾನು
ನಿನ್ನೆದೆಯು ಉಂಡೀತು ಮುರಳಿಗಾನ
*****