(ಸಾವಿತ್ರಿ)
ಕೊನೆಗಲ್ಲಿ ಬಂತು ಬರಿದೆನುವ ಬಯಲು ಆ ಉದಾಸೀನ ಬಾನು.
ಕೋಟಿ ಪ್ರಶ್ನೆ ಏನೇನು ? ಇರಲಿ ಉತ್ತರವು ಬ್ರಹ್ಮ ನಾನು.
ವಿಶ್ವ ಹೇಳುತಿದೆ ಮೌನ ಕೇಳುತಿದೆ ಮನನ ಏಕತಾನು.
ಜೀವ ಜಿಜ್ಞಾಸೆಗಿಲ್ಲ ಕೊನೆಯು ಪ್ರತಿ ಮೌನ ಕಾಮಧೇನು.
ಲವಲವಿಕೆಯೆಲ್ಲ ಎಕ್ಕೆಕ್ಕಿ ನಡೆದು ಮುಗ್ಗರಿಸಿಕೊಂಡು ಬಿತ್ತು.
ಬರಿ ಸಾಮಸೂಮ ಹಬ್ಬುತ್ತ ಒಮ್ಮೆಗೆಲೆ ಸ್ತಬ್ಧವಾಗಿ ಇತ್ತು.
* * *
ನಿರಾಕಾರ, ನಿಶ್ಚರ್ಯ ಮತ್ತು ನಿಃಶಬ್ಬ ಪುರುಷನೊಬ್ಬ.
ಹೊತ್ತು ಹೊರತಾಗೆ, ತನ್ನ ತಿಳಿದವನು ತಾನೆ ತಾನು ಆಗಿ,
ನಿಸ್ತರಂಗದಾ ಆಳದಲ್ಲಿ ಅರಿವೆನಿಸಿ ಆಗಳೂನೂ
ನಿರ್ಮಾತನಲ್ಲ, ನಿರ್ಮಾಣವಲ್ಲ, ಪೂರಾ ಅಜಾತನಾಗಿ
ಒಂದರದೆ ಹಲವು, ಇವನಿಂದೆ ಹರವು, ಎರವಿಲ್ಲದೊಬ್ಬನೊಬ್ಬ,
ಇಲ್ಲದಕೆ ಅಳತೆ ಬೆಳ್ಳಂ ಬೆಳಕು-ಮುಸುಕಿತ್ತು ಗುಪ್ತವಿರಿಸಿ.
ಅವ್ಯಕ್ತ ತನ್ನ ಆವರಣಗಳಲಿ ಕಾಪಾಡಿದಂತೆ ಉಳಿಸಿ,
ವಿಶ್ವದೊಂದು ವಿಷ್ಕಂಭದಾಚೆ ಲೋಕಾಲೋಕ ದಾಟಿ,
ಬ್ರಹ್ಮದಕ್ಷರದ ಪರಂಧಾಮ ಏಕೋ ಏಕವೆನಿಸಿ,
ಅರಿದಾದ ಗೂಢಕಾರಣವು ತಾನು ದುರ್ಭೇದ್ಯದಾತನಾಗಿ,
ಚಿರಂತನವು ತಾ, ತಾನನಂತ್ಯ ಕೇವಲವಗಮ್ಯವಾಗಿ,
* * *
ಆಕಾರವಿರದ ಆಕಾರವೊಂದು ಆತ್ಮಾರ್ಥವೆಂದು ತಿಳಿಯೆ,
ತುಹದ್ಭೂತ ಗತಿಸಿರಲು ಅದರ ಘನಛಾಯೆ ಹಿಂದೆ ಉಳಿಯೆ,
ಆ ಅಪಾರ ಪಾರಾವಾರದಲ್ಲಿಳಿವ ಮೊದಲು ಗಳಿಗೆ,
ಅಳಿವೆ ಅಲೆಯಲೆಯ ಕೊನೆಯ ಕಲೆಯ ಅನುಭವದ ಹಾಗೆ ಕಳೆಯೆ,
ಶೂನ್ಯ ಸಾಗರದ ತೀರದಲ್ಲೆ ಇಂಗಿಂಗಿ ಜಡಧಿ ಹೋಗೆ,
ಬಯಲು ಭಾವನೆಯ ತೇವ ಭಾವಿಯಲೆ ಆರಿಹೋದ ಹಾಗೆ,
ಅವಕಾಶವನ್ನು ನೆಂಬಿಲ್ಲ ಎಂಬ ಮಹದಾತ್ಮಧ್ಯಾನ ಪ್ರಖರ,
ಕಾಲವನೆ ಕೊಸರಿ ನಿಡಿದಾದ ತಾನು ಶಾಶ್ವತದ ಶೂನ್ಯಶಿಖರ,
ಅದ್ಭುತವು ಭವ್ಯ ವ್ಯಭಿಚರಣೆ ಇದರ ಸುಸ್ಥಾಣು ದಾಂತಶಾಂತ.
ಜಗಜೀವಗಳನು ತಾ ಹೊರಗು ಮಾಡಿ ನಿಬ್ಬೆರಗು ಮೌನವಾಂತ
ಎರಡರಿಯದೊಂದು ಕೈವಲ್ಯ ನೈಜ ಬರಿಬೆತ್ತಲೆತ್ತಲೂನೂ.
ಕಂಡಿತ್ತು ಅವನ ಕಡು-ರಾಗಿ ಜೀವ ಅರಸರಸಿ ಕೊನೆಗೆ ತಾನು.
* * *
ಆಳಾದ ಶಾಂತಿ ಅಲ್ಲಿತ್ತು, ಇಲ್ಲ ಹೆಸರಿರದ ಶಕ್ತಿಯಾಕೆ
ಇರಲಿಲ್ಲ ಅಲ್ಲಿ ಮಾಧುರ್ಯವಂತೆ, ಮಾಶಕ್ತಿ ನಮ್ಮ ಮಾತೆ
ತನ್ನೆದೆಗೆ ಅವಚಿಕೊಳುವವಳು, ತನ್ನ ಸಂತತಿಯ ಬಾಳ್ಕೆ ಜೋಕೆ.
ಏನವಳ ಹಿಡಿತ, ಸಕಲ ಪ್ರಪಂಚ ಆ ಅಗಲ ತಕ್ಕೆಯಲ್ಲಿ
ನೆಲೆ ಹತ್ತದಂಥ ಹರ್ಷಪ್ರಮೋದ ಆನಂತ್ಯದಬ್ಧಿಯಲ್ಲಿ
ನಾಳೆ ನಾಡಿದಿನ ಬಾಳಕಾಳು ಬೆಳೆಸೆನುವ ಮೋದಮುದ್ರೆ
ದೈವದುನ್ಮಾದದಲ್ಲಿ ಬಿಳಿಗಾವು ಎದ್ದ ಭಾವಭದ್ರೆ.
* * *
ಬೆಳಕುಕತ್ತಲೆಯ ಎರಡು ಗೋಲಗಳು ಒಂದನ್ನೊಂದು ದೂಡೆ,
ಮೇರೆಗೆರೆಯಲ್ಲಿ ಆತ್ಮಚರಿತಕ್ಕೆ ಗೀರುಹಾದಿ ಮಾಡೆ
ಕ್ಷಣಿಕ ಘಟನೆಗಳ ರಾಜ್ಯದಲ್ಲಿ; ಜೀವಪ್ರಪಂಚದಲ್ಲಿ.
ಬದುಕಲಿಕ್ಕೆ ಸಾಯುವರು ಅಲ್ಲಿ ಬದುಕುವರು ಸಾವಿಗೆಲ್ಲಿ?
ಮರಳಿ ಮರಳಿ ಮರಣವನೆ ಉಂಡು ಅಮರತ್ವ ಭೋಗಭಾಗಿ
ತನ್ನ ಕೃತಿಯ ಗೋಪುರದ ಚಕ್ರದಲಿ ವಕ್ರವಕ್ರವಾಗಿ
ಆಡಿದ್ದೆ ಆಡಿ ಮಾಡಿದ್ದೆ ಮಾಡಿ ಬಲಗೊಂಬುವಂತೆ ಆಗಿ
ಮೂಲ ಭಂಡವಲು ಮುಗಿಯಲಿಲ್ಲ, ನಿಜ, ಬೆಳೆಯಲಿಲ್ಲ ಕೂಡ
ಜ್ಞಾನವೆಲ್ಲ ಅಜ್ಞಾನದಂತೆ ಮೊದಲಿದ್ದ ಹಾಗೆ ಮೂಢ.
ಆತ್ಮದಾನಂತ್ಯದಿಂದ ಮರೆಯಾಗಿ ಅದುವು ಸಾಗುತಿತ್ತು.
ಇರವು ಬಂಧನದ ಬಾಳು; ಸಾವುದೇ ಮುಕ್ತಿ ಎನಿಸಲಿತ್ತು.
*****