ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆವೆನಯ್ಯಾ
ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ
ಹಡಿಕೆಗೆ ಮೆಚ್ಚಿದ ಸೊಣಗ ಅಮೃತದ ರುಚಿಯ ಬಲ್ಲುದೆ
ಕೂಡಲಸಂಗಮದೇವಾ
[ಕಾಂಚನ-ಚಿನ್ನ, ಹಡಿಕೆ-ಎಲುಬು, ಸೊಣಗ-ನಾಯಿ]
ಬಸವಣ್ಣನ ವಚನ. ದುಡ್ಡು ಎಂಬ ನಾಯಿಯನ್ನು ನಂಬಿಕೊಂಡು ನಿಮ್ಮನ್ನು ಮರೆತುಬಿಟ್ಟೆ. ದುಡ್ಡು ಎಂಬ ನಾಯಿಗೆ ಗಮನಕೊಡುವುದಕ್ಕೆ ಸಮಯವಿರುತ್ತದೆ, ಆದರೆ ನಿಮ್ಮನ್ನು ನೆನೆಯುವುದಕ್ಕೆ ಸಮಯವೇ ಇಲ್ಲ. ಎಲುಬನ್ನು ಮೆಚ್ಚಿದ ನಾಯಿಗೆ ಅಮೃತದ ರುಚಿ ತಿಳಿಯುವುದೆ?
ಏನನ್ನಾದರೂ ಒಂದನ್ನು ಹಿಡಿದುಕೊಳ್ಳದಿದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಸುಮ್ಮನಿರುವುದು ಅಸಹನೀಯ ಚಡಪಡಿಕೆಯ ಕೆಲಸ. ಮನಸ್ಸಿಗೆ ಇಷ್ಟವಾದ ಸಂಗತಿ ದೊರೆತಾಗ ಸಮಯ ಸರಿದದ್ದೇ ತಿಳಿಯದು. ನಮಗೂ ಮನಸ್ಸಿಗೂ ಅಂತರವಿದ್ದಾಗ ನಾವು ಬಯಸಿದ್ದನ್ನು ಮನಸ್ಸು ಬಯಸದು. ಹಾಗಾದಾಗ ನಮಗೆ ಇಷ್ಟವಿಲ್ಲದ ಸಂಗತಿಯನ್ನು ಕೀಳಾಗಿ ಕಾಣುವುದೊಂದು ಉಪಾಯ. ಎಂಥವರನ್ನೂ ಸೆಳೆಯುವ ಶಕ್ತಿ ಇದೆಯಲ್ಲಾ ದುಡ್ಡಿಗೆ, ಅದನ್ನು ನಾಯಿ ಎಂದು ಹೀಗಳೆದಾದರೂ ಮನಸ್ಸನ್ನು ದೇವರ ಎಡೆಗೆ ತಿರುಗಿಸುವ ಪ್ರಯತ್ನವೋ ಇದು?
ಅದಕ್ಕಿಂತ ಮಿಗಿಲಾಗಿ ಮನಸ್ಸು ಬಯಸಿದ್ದರಲ್ಲಿ ಮುಳುಗಿ ಹೋದರೆ ವೇಳೆಯ ಅರಿವೂ ವೇಳೆಯ ಮೇಲಿನ ಹತೋಟಿಯೂ ತಪ್ಪಿ ಹೋಗುತ್ತದೆ. ಅಯ್ಯೋ ಸಮಯವೇ ಇಲ್ಲವಲ್ಲಾ ಎಂಬ ಸಬೂಬು ಹೊಳೆಯ ತೊಡಗುತ್ತದೆ.
ಟೈಮೇ ಇಲ್ಲ ಅನ್ನುವ ಮಾತು ನಾವೆಲ್ಲ ಸಾಮಾನ್ಯವಾಗಿ ಹೇಳಿಯೇ ಇರುತ್ತೇವೆ. ಯಾವ ಕೆಲಸಕ್ಕೆ ಟೈಮಿಲ್ಲವೋ ಅದು ನಿಜವಾಗಿ ನಮ್ಮ ಮನಸ್ಸಿಗೆ ಒಗ್ಗದ, ಬೇಡದ ಕೆಲಸ ಅಲ್ಲವೇ?
*****