ಇದಿರೆನ್ನ ಹಳಿವವರು ಮತಿಯ ಬೆಳಗುವರು
ಮನದ ಕಾಳಿಕೆಯ ಕಳೆವವರೆನ್ನ ನಂಟರು
ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ
ಹೇಯೋಪಾದಿಯ ತೋರುವವರು
ಇದು ಕಾರಣ ನಾನನ್ಯ ದೇಶಕ್ಕೆ ಹೋಗೆನು
ಸಕಳೇಶ್ವರದೇವರ ತೋರುವರೊಳರು ಇಲ್ಲಿಯೆ
[ಕಾಳಿಕೆ-ಕಲ್ಮಶ, ತೋರುವರೊಳರು-ತೋರುಬಲ್ಲಸಮರ್ಥರು]
ಸಕಲೇಶಮಾದರಸನ ವಚನ. ಬೇರೆಯ ಊರಿಗೆ ಹೋಗಿ ನೆಲೆಸುವ ಆಸೆಯಾದರೂ ಯಾಕೆ? ಬೇರೆಯ ಜನ, ಬೇರೆಯ ವಾತಾವರಣ, ಬೇರೆಯ ರೀತಿಯ ಬದುಕಿನ ಆಸೆಯಲ್ಲವೇ? ಸಕಲೇಶಮಾದರಸ ಹೇಳುವ ಈ ಮಾತು ಕೇಳಿ. ಎಲ್ಲಿ ಹೋದರೂ ನನ್ನ ಟೀಕಿಸುವವರು, ನಿಂದಿಸುವವರು ಇದ್ದೇ ಇರುತ್ತಾರೆ. ಅವರು ನನ್ನ ಮತಿಯನ್ನು ಬೆಳಗುತ್ತಾರೆ.
ಎಲ್ಲಿ ಹೋದರೂ ನನ್ನ ಆತ್ಮೀಯರಾಗುವ ನಂಟರು ಬೇಕು, ಅವರು ನನ್ನ ಮನಸ್ಸಿನ ಕಲ್ಮಶ (ಕಾಳಿಕೆ)ಯನ್ನು ಕಳೆಯುತ್ತಾರೆ. ಎಲ್ಲಿಗೆ ಹೋದರೂ ದುರಾಚಾರಿಗಳು ಇದ್ದೇ ಇರುತ್ತಾರೆ. ಅವರು ನನ್ನೊಳಗೇ ಇರುವ ಕೆಡುಕಿಗೆ ಕನ್ನಡಿ ಹಿಡಿಯುತ್ತಾರೆ. ಇಲ್ಲಿ ಇರುವ ನಿಂದಕರು, ನೆಂಟರು, ದುಷ್ಟರು ಬೇರೆ ಊರಲ್ಲಿಯೂ ಅವರೇ ಅಲ್ಲವೇ?
ನನ್ನನ್ನು ನನಗೇ ತೋರುವವರು ಇಲ್ಲೇ ಇರುವಾಗ ಅನ್ಯದೇಶಕ್ಕೆ ಹೋಗಲೊಲ್ಲೆ ಎನ್ನುತ್ತಾನೆ ಸಕಳೇಶ ಮಾದರಸ. ಎಲ್ಲಿದ್ದೇವೆ ಅನ್ನುವುದಕ್ಕಿಂತ ನಾವು ಇರುವಲ್ಲಿ ಎಂಥ ಸಂಬಂಧಗಳನ್ನು ಕಟ್ಟಿಕೊಂಡಿದ್ದೇವೆ, ಆ ಸಂಬಂಧಗಳಿಂದ ನಮ್ಮನ್ನು ನಾವು ಹೇಗೆ ಅರಿಯುತ್ತೇವೆ ಅನ್ನುವುದು ಮುಖ್ಯವಲ್ಲವೇ?
*****