ಧನ್ಯಾಸಿ
ಸತಿಯನಿತು ಪತಿಗೆ ಹತ್ತಿರದ ಜೊತೆಯಾಸತಿಗೆ
ಪತಿಯನಿತು ಬಳಿಯಾವುದಿಲ್ಲವಂತೆ !
ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು
ಅತಿ ದೂರದಂತರವಿದೇತಕಂತೆ ?
ಮಡದಿಯಲ್ಲದೆ ಅವನ ಮುಡಿಗೆ ನಾನಾಗಿದ್ದ-
ರೆಡೆಬಿಡದೆ ಇರುತಿರ್‍ದೆ ಮುಡಿಯ ಮೇಲೆ,
ಮುಡಿಗೆ ಹೋಗಲಿ ಅಡಿಯ ತೊಡವದಾಗಿದ್ದರೂ
ಅಡಿಯೊಂದಿ ಇರುತಿರ್‍ದೆನೇನು ಕೀಳೇ ?
ಕೊರಳ ಮಣಿಮಾಲೆಯಾಗಿರುತಿರ್ದ್ದರೆನಿತೊಳಿತೊ !
ಅರಸನೆದೆಯಪ್ಪಿನಾ ಮೆರೆಯುತಿರ್ದ್ದೆ.
ಕೊರಳಸರಬೇಡ ಕಿರುಬೆರಳಿನುಂಗುರವಿರಲು
ಕರವ ಬಿಟ್ಟಿರದೆ ಸುಖ ಸುರಿಯುತಿರ್ದ್ದೆ.
ಚೆನ್ನ ನಡುವಿನೊಳಿಟ್ಟ ಚಿನ್ನದೆಳೆಯುಡುದಾರ
ಪುಣ್ಯವೆನಿತನ್ನು ಮಾಡಿರುವುದೇನೋ !
ಹೆಣ್ಣನಲ್ಲದೆ ನನ್ನ ಚಿನ್ನದೆಳೆಯನ್ನಾಗಿ
ಹಣ್ಣಿದ್ದರಾ ವಿಧಿಗೆ ಹಾನಿಯೇನೋ !
ತಂಬುಲವೆ ನಾನಾಗಿ ಜನಿಸಿರ್ದ್ದರಿನಿಯನಾ
ಚೆಂಬವಳದುಟಿ ಸೋಂಕಿ ನಲಿಯುತಿರ್ದ್ದೆ,
ಹೆಂಬದುಕನೇಕೆ ಹಾಕಿತು ದೈವ ? ಇನಿತೊಂದು
ಹಂಬಲಿಸಿ ಹಂಬಲಿಸಿ ಹಲುಬಲೆಂದೇ ?
ಸತಿಯನಿತು ಪತಿಗೆ ಹತ್ತಿರದ ಜೊತೆಯಾ ಸತಿಗೆ
ಪತಿಯನಿತು ಬಳಿ ಯಾವುದಿಲ್ಲವಂತೆ,
ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು
ಅತಿ ದೂರದಂತರವಿದೇತಕಂತೆ!
*****