ಆದಿ ಅನಾದಿ ಇಲ್ಲದ ಬಟ್ಟ ಬಯಲಿನ
ಹೂವಿನ ಕಂಪನ ನೀರಿನ ಕಂಪನ ಮನಸ್ಸಿನ
ಕಂಪನ ದೇಹದ ಕಂಪನ ಎಲ್ಲವನ್ನೂ ಸಮೀಕರಿಸಿ,
ಉಂಟು ಇಲ್ಲ ಎಂಬವರ ಲೆಕ್ಕಕ್ಕೆ ಚುಕ್ತಾ ಮಾಡುವ
ಮಿಂಚು ಕತ್ತಲೆಗಳ ನಡುವೆ ಸೆಳೆವ ಹೊಸ ಪದ
ಪ್ರಯೋಗ ಗುಹೇಶ್ವರ.
ದೇಶ ಕಾಲಗಳ ಇತಿಹಾಸದ ಪುಟಗಳ ಸರಿಸಿ,
ಇದ್ದ ಬಯಲಿನ ಘಮ ಘಮ ಆಕಾಶಕ್ಕೆ
ಪಸರಿಸಿ, ಎಲ್ಲಾ ದಿಕ್ಕುಗಳಲ್ಲಿ ಬೆಳಕ ಕಿರಣಗಳ
ಹರಡಿ ಹಾಸಿ ಇದು ಕಾಣಿ ನಿಜದ ನೆರಳು
ಪದಗಳ ಅರ್ಥಗಳ ಗಂಟು ಕಟ್ಟಿ ಮಾಯೆಯ
ಗೆಜ್ಜೆಯ ಹೊಸ ರಿಂಗಣ ಗುಹೇಶ್ವರ.
ಉರಿದ ಶರೀರದ ಬೂದಿ ಚೆಲ್ಲಿ ಹರಡಿ ಹಾಸಿದ
ಬಯಲು ಅಣು ಅಣುವಿನಲಿ ಲೋಕದ ತುಂಬ
ಮೊಗ್ಗುಗಳು ಹೂಗಳಾಗಿ ಅರಳಿ ಘಮ ಹರಡಿ,
ಅವನ ಪ್ರಜೆಯ ಒಳಗೂಡಿದ ಒಳ ಹರವು
ಮೋಹ ಮರುಳದ ಲಯವಾಗಿ ಕರಗಿದ ಜಂಗಮ
ಸರಸವಾದ ಗುಹೇಶ್ವರ.
ಕಣ್ಣು ಕಕ್ಷೆ ಮೀರಿ ಅರಳಿದ ಆಂತರ್ಯದ ಚೆಲುವು
ಮಾಯೆಯ ಮುಸಕ ಎಳೆದು ಆ ಮಾತು ಈ
ಮಾತ ಜಗದ ಸಂತೆಯ ತುಂಬ ಶರಣ
ಸತಿ ಲಿಂಗಪತಿ, ಭವದ ದಾವತಿ, ಶರೀರದ
ಅವಸ್ಥೆ ಅಭೇಧ್ಯನರಿಯವರ ಮರಳು ಮಾಡಿದ
ಗುಹೇಶ್ವರ ನಿರಂತರ ಸಾವಧಾನಿ.
*****