ನನ್ನ ಕಹಿ ಅನುಭವಗಳು
ದ್ರಾಕ್ಷಿ ರಸದ ಹುಳಿಯಂತೆ
ಲೊಳೆಗುಟ್ಟಿದಾಗ ನೀನು ಮೆಲ್ಲನೆ
ಇಬ್ಬನಿ ಹನಿ ಬೆರೆಸಿ, ತುಸು ಕಬ್ಬುರಸ ಸೇರಿಸಿ
ತಿಳಿಯಾದ ಪಾನಕ ಮಾಡಿದ ಇರುಳು.
ಮರುದಿವಸ ಬಾಲಸೂರ್ಯನ ಹೊಂಗಿರಣಗಳು
ಸೋಕಿ ಆಕಾಶದ ತುಂಬೆಲ್ಲಾ ಹಕ್ಕಿಗಳ ಹಾರಾಟ
ನನ್ನ ದುಷ್ಟ ಸಪ್ನಗಳು ಕಾಡಿ
ಕಾಡಿ ಪಾದಗಳಿಗೆ ಬಿಗಿದ ಹಗ್ಗ
ಓಡಲಾರದೇ ಮುಗ್ಗುರಿಸಿದ ದಿನಗಳು
ನಿತ್ಯ ನೂತನದ ತಂಗಾಳಿ ಅಲೆಗಳ ಹರಸಿ
ತೇಲಾಡಿದ ಹಣ್ಣುಗಳು ಹಸಿರು ರಾಶಿ ಹಗಲು
ಮರುದಿವಸ ನೀಲ ಬಾನತುಂಬು ಮಿಣಿ ಮಿಣಿ
ನಕ್ಷತ್ರಗಳ ಮಿನಗು ಎದೆಯಲಿ ಕೋಲ್ಮಿಂಚು
ಹುಚ್ಚು ಹುಚ್ಚಾಗಿ ಮಾತನಾಡಿದ
ಜನರ ಚುಚ್ಚು ಮಾತುಗಳ ಬಾಣದ
ಬಿರುಸು, ಜೋರಾದ ಪಟಾಕಿ ಸದ್ದುಗಳು
ಅಮಲು ಗಣ್ಣಿನ ನೀಲಿ ಅಂಗಿಯ ಹುಡುಗ
ಕಾಡಿದಾಗ ಸೂರ್ಯ ಕಂಡ ಎಂತಹ ಹಗಲು!
ಮರುದಿವಸ ಮನೆಯ ಮುಂದಿನ ಗುಡಿಸಲು
ಹೊಸ ರೂಪ ತಳೆದ ಮಗುವಿನ ಅಳು ಮತ್ತೆ
ಖುಷಿಯ ಬಾಲ್ಯ ಅರಳಿತು
*****