ಈ ಮಾಗಿದ ಸಂಜೆ ಅವಳ ತಲೆಗೂದಲೆಲ್ಲಾ
ಬಿಳಿಬಿಳಿ ಮೋಡಗಳ ರಾಶಿ, ಎದೆಯ ಆಳಕ್ಕೆ
ಇಳಿವ ಅವಳ ಮೌನ ನೋಟದ ತುಂಬ ಈ
ಬದುಕ ನೆರಳು, ಅಲ್ಲಾಡುತ್ತಿವೆ ಹಳದಿ ಎಲೆಗಳು.
ಅವಳು ಮಾತನಾಡುವುದಿಲ್ಲ. ಬರೀ ನಿಟ್ಟುಸಿರು
ಬಿಡುತ್ತಾಳೆ. ಎಲೆಗಂಟಿದ ಇರುವೆಯ ಕಾಲಗಳು
ತುಂಬ ಸ್ಮೃತಿಗಳು ಅರಳಿ, ಮಳೆ ಬಂದ ಸಂಜೆ.
ಅವಳು ಮಗುವಾದಳು ಭಾವಕೋಶದಲಿ ಅವನ
ಹಾಡು.
ವಿಷಾದದ ಅಲೆಗಳು ಅಪ್ಪಳಿಸುತ್ತಿವೆ ಅವಳ ಮುದಿ
ನದಿಯ ದಂಡೆಯ ಗುಂಟ, ಬೆಳಕಿನ ದಾರಿ ದಾಟಿ,
ಒಣಗಿದ ಪಾಚಿಯ ಬಂಡೆಯಂತೆ ಮಸುಕಾಗಿ,
ಒಂದಾಗಿ ಹಣ್ಣಾಗಿದ್ದಾಳೆ ಅನುಭವದ ಕುಲುಮೆಯಲಿ.
ಮನಕ್ಕೆ ಅಂಟಿದ ಸುವಾಸನೆಗಳ ಮಧುರ ನೆನಪು,
ಅವಳ ಆಳದಲಿ ಕೆಂಪಾಗಿ ಹವಳದ ಹರಳುಗಳು,
ಚಿಕ್ಕೀ ಇಲ್ಲದ ಅವಳ ಬಳೆಗಳಿಗೆ ಚಂದ್ರ ಬಿಂಬ,
ಕತ್ತಲ ಸುರಂಗದಲಿ ಹುಡುಕುತ್ತಿದ್ದಾಳೆ ಕಿರಣಗಳ.
ದುಃಖದ ಸಂಜೆಯ ಖಾಲಿ ಆಕಾಶದಲಿ, ಅವಳ
ಮೊಮ್ಮಗಳು ಚಕ್ಕೀ ಹೊಳಪು ಮೂಡಿಸುತ್ತಿದ್ದಾಳೆ.
ಹಕ್ಕಿಯಾಗಿ ಹಾರಾಡಿ ಅಂಗಳದ ತುಂಬ ಬಣ್ಣ
ಬಣ್ಣ ಚಿಟ್ಟೆ ಹರಿದಾಡಿ ಅವಳ ಬೊಚ್ಚುಬಾಯಿ
ನಗೆಬಿರಿಯಿತು. ಅವಳೀಗ ಹಸಿ ಜೋಳದ ತೆನೆಯ
ಹಾಲು.
*****