ಗಂಧ ಕಸ್ತುರಿ ಪುನಗಽ |
ಗೌರವ್ವನ | ಕಂದಗ ಧರಿಸಿದರಽ |
ಅಂದದ ಬಿಳಿಎಲಿ ಆಡಕಿ ಕಾಚವು ಸುಣ್ಣ |
ಮುಂದ ಮಡೆಚಿನಿಟ್ಟು ಮಲ್ಲಿಽಗಿ ಮಳೆಗರೆದ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೧||
ರಾಜಾನ್ನ ಕೆನೆಮಸರಽ |
ರುಚಿಗಾಯಿ | ಭೋಜನಕ ಸವಿಮಜ್ಜಿಗೆಽ |
ಸಾಜನಾಗಿ ಬಂದು ಸೆಳೆಮಂಚದಲಿ ಕುಳಿತು |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೨||
ಹಣ್ಣ ಹಪ್ಪಳ ಶೆಂಡಿಽಗಿ |
ಎಳಸಾದ | ಸಣ್ಣ ಶಾವಿಗಿ ಬಸೆದಽ |
ಉಂಡ ಮಗಿ ನೊರೆಹಾಲ ಉದರ-ಸಕ್ಕರಿ ತುಪ್ಪ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೩||
ಚಿಗುಳಿ ಚಿನ್ಪಾಲ್ ಬಚ್ಚೇವಽ |
ಚಿಟುಬಾಳಿ | ಅಗಲೋಳು ಗರಿಕಾಣೆನಽ |
ಪರಿಪರಿ ಸೋಬಸ್ತ ಪರಿಮಽಳನೇರಸ್ತ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೪||
ಸುರ ಹರಿ ನಮ ದೇವರ ಕಾಳಿಽ |
ಧೊರಿಪೂಜಿ | ಧೊರಿಪೂಜಿ ಮಾಽಡುನಽ |
ಪರಿಪರಿ ಸೋಬಸ್ತ ಪರಿಮಽಳನೇರಸ್ತ |
ಮತಿಯ ಪಾಲಿಸೊ ಎನಗಽ |
ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೫||
*****
ಈ ಹಾಡಿನ ಮೊದಲನೆಯ ನುಡಿಯಲ್ಲಿ ಪೂಜೆಯ ಪರಿಯೂ ಮುಂದಿನ ಮೂರು ನುಡಿಗಳಲ್ಲಿ ನೈವೇದ್ಯದ ವಿಸ್ತಾರವೂ ವರ್ಣಿಸಲ್ಪಟ್ಟಿವೆ. ಕೊನೆಯ ನುಡಿಯು ಸಾಂಪ್ರದಾಯಿಕವಾಗಿದೆ.
ಛಂದಸ್ಸು: ಐದೈದು ಮಾತ್ರೆಯ ಗಣಗಳಿವೆ. ಮೊದಲನೆಯ ನುಡಿಯಲ್ಲಿ ಒಂದು ಡೊಡ್ಡ ಚರಣವು ಹೆಚ್ಚಿಗೆ ಬಿದ್ದಿದೆ.
ಶಬ್ದ ಪ್ರಯೋಗಗಳು: ಸಾಜ=ಶೃಂಗಾರ. ಸೆಳೆಮಂಚ=ತೂಗುಮಣೆ. ಸೋಬಸ್ತ=ಶೋಭಿಸುತ್ತ. ಏರಸ್ತ=ಏರಿಸುತ್ತೇನೆ. ಧೊರಿಪೂಜಿ=ವೈಭವದ ಪೂಜೆ. ಸೆಂಡೆಗಿ, ಹೆಪ್ಪಳ, ಶಾಂವಗಿ, ಚಿಗುಳಿ ಇವು ಭೋಜನದ ಪದಾರ್ಥಗಳು. ಚಿನ್ಪಾಲ್ ಮತ್ತು ಬಚ್ಚೇವ ಎಂಬವುಗಳೂ ಅವೇ. ಆದರೆ ಇವೆರಡರ ಸರಿಯಾದ ಕಲ್ಪನೆ ಮಾತ್ರ ಬರುವಂತಿಲ್ಲ.
“ಚಿಟುಬಾಳಿ ಅಗಲೋಳು ಗರಿ ಕಾಣೆನ” ಎಂದರೆ ಕಿರಿಬಾಳಿಯ ಎಲೆಯ ಮೇಲೆ ಎಡೆಬಡಿಸಿದ ಸಾಮಗ್ರಿಗಳು, ಎಲೆಯ ನಡುವಿನ ಗರಿ ಕಾಣದಷ್ಟು ತುಂಬಿದ್ದನೆಂದು ಅರ್‍ಥ.
ಈ ಹಾಡು ಪಾಂಚಾಲ ಜಾತಿಯವರಲ್ಲಿ ಪ್ರಚಾರವುಳ್ಳದ್ದಾಗಿರುವುದರಿಂದ ಅವರ ಆರಾಧ್ಯದೈವತವಾದ ಕಾಲೀದೇವಿಯ ಉಲ್ಲೇಖವು ಕೊನೆಯ ನುಡಿಯಲ್ಲಿದೆ.