ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು
ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ
ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ
ಚೆನ್ನಮಲ್ಲಿಕಾರ್ಜುನಯ್ಯಾ
ಗುರುಪಾದವ ಕಂಡು ಧನ್ಯಳಾದೆ ನೋಡಾ
[ಅರಲುಗೊಂಡ ಬತ್ತಿದ ಬರಲುಗೊಂಡ-ಒಣಗಿದ]
ಅಕ್ಕಮಹಾದೇವಿಯ ವಚನ. ಅಕ್ಕ ತನ್ನ ಗುರುವನ್ನು ಕಂಡು ಆದ ಸಂತೋಷವನ್ನಿಲ್ಲಿ ವ್ಯಕ್ತಪಡಿಸಿದ್ದಾಳೆ. ಈ ವಚನದ ಚೆಲುವು ಇರುವುದು ಆಕೆ ಬಳಸಿರುವ ಹೋಲಿಕೆಗಳಲ್ಲಿ, ಮಾತಿನ ಲಯದಲ್ಲೇ ಮನಸ್ಸಿಗೆ ಆದ ಸಂತೋಷ ನೆಮ್ಮದಿಗಳನ್ನು ಪ್ರಕಟಿಸಿರುವ ರೀತಿಯಲ್ಲಿ.
ಬತ್ತಿ ಹೋದ ಕೆರೆಗೆ ತೊರೆಯೇ ಹರಿದು ಬಂದರೆ ಬತ್ತಿದ ಕೆರೆಗೆ ಆಗುವ ಸಂತೋಷದಂತೆ, ಒಣಗಿ ಬರಲು ಬರಲಾಗಿರುವ ಸಸಿಯ ಮೇಲೆ ಮಳೆ ಸುರಿದಾಗ ಆಗುವ ಸಂತೋಷದಂತೆ ಗುರುವಿನ ಪಾದ ಕಂಡಾಗ ನನಗನ್ನಿಸಿತು. ಇಹದ ಸುಖ, ಪರದ ಗತಿ ನನ್ನತ್ತ ನಡೆದುಬಂದಂತಾಯಿತು ಎನ್ನುತ್ತಾಳೆ.
ಬತ್ತಿ ಹೋದದ್ದು, ನಿರ್ಜೀವವೇ ಆದದ್ದು ಮತ್ತೆ ತುಂಬಿಕೊಂಡ, ಜೀವಂತವಾದ ಸಾರ್ಥಕತೆ ಗುರುವನ್ನು ಕಂಡಾಗ ಆಯಿತು. ಇದು ಇಹದ ಸುಖ, ಹಾಗೆಯೇ ಗುರುವು ಪರದ ದಾರಿಯನ್ನೂ ಮುಂದಿನ ಗತಿಯನ್ನೂ ತೋರಬಲ್ಲವನು. ಗುರುವನ್ನು ದೈವದ ಇನ್ನೊಂದು ರೂಪವೇ ಎಂದು ಕಾಣುವುದರಿಂದ ಚನ್ನಮಲ್ಲಿಕಾರ್ಜುನನನ್ನು ತೋರಬಲ್ಲಾತನ ಕಂಡ ಸಂತೋಷವನ್ನು ಈ ವಚನ ಹೇಳುತ್ತದೆ.
*****