ಅತಿಮಥನವೆಂಬ ಯೋಗವೆನ್ನ ಗತಿಗೆಡಿಸಿತ್ತಯ್ಯ
ದಿತಿಗೆಟ್ಟೆ ನಾನು ಅದರಿಂದ
ಅತಿಶಯದ ತಾತ್ಪರ್ಯ ಗುರುಭಕ್ತಿಯನರಿಯದೆ
ದಿತಿಗೆಟ್ಟೆನಯ್ಯ ತಾತ್ಪರ್‍ಯವನರಿಯದೆ
ತವಕಿಸುವ ಮನವನು ನಿಮ್ಮ ಕಡೆಗೆ ತೆಗೆದುಕೊಂಡು
ಅತಿಶಯದ ತಾತ್ಪರ್ಯ ಗುರುಭಕ್ತಿಯ ಈಯಯ್ಯಾ
ಕಪಿಲಸಿದ್ಧಮಲ್ಲಿಕಾರ್‍ಜುನಾ
[ಅತಿಮಥನ- ಅತಿಯಾದ ವಿಶ್ಲೇಷಣೆ, ದಿತಿಗೆಟ್ಟೆ-ಧೃತಿಗೆಟ್ಟೆ, ಗತಿ-ಚಲನೆ, ಬಾಳು, ಭವಿಷ್ಯ]
ಸಿದ್ಧರಾಮನ ವಚನ. ಇದು ಅತಿಯಾದ ವಿಶ್ಲೇಷಣೆಯ ಅಪಾಯವನ್ನು ಕುರಿತು ಹೇಳುವಂತಿದೆ. ಅತಿಮಥನದ ಪ್ರವೃತ್ತಿಯು ಮನಸ್ಸಿನ ನೆಮ್ಮದಿಯನ್ನು ಕೆಡಿಸುತ್ತದೆ. ಮಥನ ಅನ್ನುವುದು ಅಗತ್ಯ; ಆದರೂ ಅದು ಅತಿ ಆದಾಗ ತೊಂದರೆಕೊಡುವುದು ಖಚಿತ. ಸಿದ್ಧರಾಮನಂತೆಯೇ ಅಲ್ಲಮ ಕೂಡ ವಿಚಾರವೆಂಬುದು ಸಂದೇಹಕ್ಕೆ ಒಳಗು ಎನ್ನುತ್ತಾನೆ.
ಅತಿಯಾದ ಮಥನ ನನ್ನ ಗತಿಯನ್ನು ಕೆಡಿಸಿತ್ತು. ಆದ್ದರಿಂದಲೇ ಅತಿಶಯದ, ವಿಶೇಷವಾದ, ಆಶ್ಚರ್ಯಕರವಾದ, ಬಲು ನೆಮ್ಮದಿಯನ್ನು ತರುವ ಗುರು ಭಕ್ತಿಯನ್ನು ಅರಿಯದೆ ಹೋದೆ. ಗುರು ಭಕ್ತಿ ಅನ್ನುವುದನ್ನು ದೊಡ್ಡದಾದುದರ ಬಗ್ಗೆ ಇರುವ ವಿನಯವೆಂದೂ ಅರ್ಥಮಾಡಿಕೊಳ್ಳಬಹುದು. ಗುರುವಿನ ಬಗ್ಗೆ ಭಕ್ತಿ ಇಲ್ಲದೆ, ಅತಿ ಮಥನದಲ್ಲಿ ತೊಡಗಿ, ಗತಿಗೆಟ್ಟ ನನ್ನ ಮನಸ್ಸನ್ನು ದೇವರು ತನ್ನತ್ತ ತಿರುಗಿಸಿಕೊಂಡು ಎಲ್ಲ ಅರ್ಥದ ಸಾರಾಂಶರೂಪವಾಗಿರುವ ಗುರುಭಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತಾನೆ ಸಿದ್ಧರಾಮ.
ದೇವರು ದೊಡ್ಡವನೇ ಇರಬಹುದು, ಆದರೆ ಕಣ್ಣಿಗೆ ಕಾಣುವ ‘ದೊಡ್ಡ’ ಸಂಗತಿಗಳ ಬಗ್ಗೆ ವಿನಯ, ಭಕ್ತಿ ಇರದಿದ್ದರೆ ನಿಜವಾಗಿ ದೊಡ್ಡವನಾದ ದೇವರು ಸಿಕ್ಕಲಾರ. ಅತಿಮಥನ ಎಂದೂ ನಿಲುಗಡೆಗೆ ಬಾರದು. ಎಲ್ಲ ಮಥನದ ಉದ್ದೇಶವೂ ಒಂದು ನಿರ್ಣಯವನ್ನು ತಲುಪುವುದೇ ತಾನೇ? ಹಾಗೆ ನಿಜವಾದ ತಾತ್ಪರ್ಯವೆಂದರೆ ಗುರುವಿನ ಕುರಿತ ಭಕ್ತಿ, ಅದು ಮಥನದಿಂದ ಅಲ್ಲ, ವಿಶ್ವಾಸದಿಂದ ಮೂಡುವುದು. ಅದು ಬೇಕು ಅನ್ನುತ್ತಾನೆ ಸಿದ್ಧರಾಮ.
*****