ಇದ್ದದ್ದನ್ನಿದ್ಹಾಂಗ ಬಾಯಿಬಿಟ್ಟು ಹೇಳಿದರ |
ಎದ್ದು ಬಂದು ಎದಿಗೀ ಒದೀತಾರಂತ || ಪ ||
ಛಲೋತ್ನಾಂಗ ಓದ್ರೀ ಅಂದ್ರ
ಕಾಪಿ ಮಾಡೋದು ತಪ್ಪೂ ಅಂದ್ರ |
ಹೊರಗ ಬಾ ನೋಡ್ಕೊತೀನಿ ಅಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೧ ||
ತೂಕಡಿಸ ಬಾಡ್ರೀ ಅಂದ್ರ
ಮೈ ಮುರಿದು ದುಡೀರಂದ್ರ |
ನಮ್ದಂಧೆ ನಮ್ಮಿಷ್ಟ ಅಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೨ ||
ಲಂಚಾ ಹೊಡಿಬ್ಯಾಡ್ರೀ ಅಂದ್ರ
ಎಂಜಲಾ ತಿನ್ನಬ್ಯಾಡ್ರೀ ಅಂದ್ರ |
ಸಿಕ್ದಾಗ ತಿನ್ನವ್ವಾ ಶಾಣ್ಯಾಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೩ ||
ಸತ್ಯಾನ ಹೇಳ್ರ್‍ಈ ಅಂದ್ರ
ಧರ್ಮಾನ ಮಾಡ್ರೀ ಅಂದ್ರ |
ತಲೀ ಕೆಟ್ಟಾದಂತ ಮಗನ ಅಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೪ ||
ಧೂಮಪಾನ ಬಿಡ್ರೀ ಅಂದ್ರ
ಮದ್ಯಪಾನ ಬಿಡ್ರೀ ಅಂದ್ರ |
ನೀ ಯಾಂವ ಕೇಳವ ಅಂತಾರಂತ
ಎದ್ದು ಬಂದು ಎದಿಗೀ ಒದೀತಾರಂತ || ೫ ||
ಇದ್ದದ್ದನ್ನಿದ್ಹಾಂಗ ಬಾಯಿಬಿಟ್ಟು ಹೇಳಿದರ |
ಎದ್ದು ಬಂದು ಎದಿಗಿ ಒದೀತಾರಂತ||
*****
೨೨-೧೨-೧೯೯೩