ಗೆದ್ದವಳು ನೀನು ಲಿಂಗಮುಖದಿಂದ
ಮನದೊಳು ಭಾವ ಲಿಂಗವ ಅರಳಿಸಿ
ಉಡುತಡಿಯಿಂದ ಕದಳಿಯವರೆಗೆ
ಹರಡಿ ಹಾಸಿದ ಜ್ಞಾನ ಬೆಳದಿಂಗಳು
ಧರೆಯಲ್ಲಾ ಪಸರಿಸಿ ಶರಣಸತಿ ನೀನು.
ಜಗ ನಂಬಿದ ಲಿಂಗದ ಘನವ
ನಿಮ್ಮ ನೆರೆ ನಂಬಿದ ಸದ್ಭಕ್ತರಿಗೆ ತೋರಿ
ಉಭಯ ಸಂಗವ ಅರಿಯದೆ ಪರಿಣಾಮಿಯಾಗಿ
ಅರಿವಿನೊಳಗೆ ಅರಿವ ಬೆಳಕು ಬೆಳಗಿದ ಅಕ್ಕ ನೀನು
ಕಂಗಳ ನೋಟ ಕರುವಿಟ್ಟಭಾವ ಹಿಂಗದ ಮೋಹ
ಎಂದೆಂದೂ ಚೆನ್ನಮಲ್ಲಿಕಾರ್ಜುನನ ಶಿಶು ನೀನು
ಅಗ್ನಿ ಶಿವನ ಆಚಾರ ಸರ್‍ವವ್ಯಾಪಕ ಹರಡಿ ಹಾನಿ
ಆತ್ಮ ಜ್ಞಾನವ ಪ್ರತಿಬಿಂಬಿಸಿ ಅವನೊಡಲ ಪ್ರಾಣ
ನೀನು ಘಮ
ನೀ ಹೆಜ್ಜೆ ಇರಿಸಿದ ಕಡೆಯೆಲ್ಲಾ ಕ್ಯಾದಿಗೆ ಘಮ
ನೆರಳ ತಂಪು ಕತ್ತಲೆಯ ಕರಗಿಸಿ ಬೆಳ್ಳಿ ಚಿಕ್ಕಿಗಳು
ತನ್ನ ತಾನರಿಯೆ ಅಂಗೈಯ ಲಿಂಗಧಾರಣೆ ಮಾಡಿ
ಭೂಲೋಕ ಸಮಸ್ತ ಜೀವಿಗಳಿಗೆ ಪ್ರಸಾದಿ
ಪ್ರಾಣಲಿಂಗಿಯಾದೆ.
ಮಾನವ ಬೆರಗು ನಿಬ್ಬೆರಗು ಆಗಿ ಅವನ ಲೋಕದ
ಶ್ಮದ್ಧ ಅನುಭಾವ ಮಂಟಪದಲಿ ನೀ ಹಾಡಿದ
ವಚನಗಳು ಮಲ್ಲಿಕಾರ್‍ಜುನನ ಮಹಿಮೆ ಅರುಹಿ
ಪರಾತ್ಪರ ಸತ್ಯ ಸದಾಚಾರ ಗುರುಲಿಂಗ ಜಂಗಮಕೆ
ಸಮರ್‍ಪಿಸುವೆ.
ಬಲ್ಲವರೊಡನೆ ಸಂಗಮಾಡಿ ಬೆಣ್ಣೆ ಕಡೆದು
ಕುಲಭ್ರಮೆ, ಜಾತಿ ಭ್ರಮೆ ಸರಿಸಿ ಸರ್‍ವ ಅಲಂಕಾರ ತುಪ್ಪ
ಕಾಯಿಸಿ, ಶಿವಶಕ್ತಿ ಶಿವ ಭಕ್ತಿ, ಶಿವಪ್ರಸಾದ
ಮಾಡಿ ಅಡಿಗಡಿಗೆ ಗುರುಪಾದಕೆ ನೈರ್‍ಮಲ್ಯ ನೀಡಿ ಧನ್ಯವಾದೆ.
ಅಕ್ಕ ಎಂದರೆ ಅಭಿನ್ನ ಜ್ಞಾನ. ಯತ್ರ ಜೀವ ತತ್ರಶಿವ
ಅಕ್ಕ ಎಂದರೆ ಹಿಂಗದ ಅನುಭಾವದ ನೀರಿನ ಭಾವಿ.
ಅಕ್ಕ ಎಂದರೆ ಇಹದಸುಖ ಪರದ ಗತಿಯ ದಾರಿ.
ಅಕ್ಕ ಎಂದರೆ ತನ್ನತಾನರಿತ ಕಂಗಳ ನೋಟ ಮನದ ಸೊಗಸು…..
*****