ಬರೆಯಬೇಕು ನಾ ಏನನ್ನಾದರೂ
ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ
ಬರೆಯಬಲ್ಲೆನಾದರೂ ನಾನು
ಉಳಿದಿರುವುದಾದರೂ ಏನು?
ಶತಶತಮಾನಗಳಿಂದ ಬರೆದು ಬರೆದು
ನವರಸಗಳೆಲ್ಲವ ಅರೆದು ಕುಡಿದು
ಮಾಡಿ ಸರಸತಿಯ ಭಂಡಾರ ಲೂಟಿ
ನನಗೇನು ಸಿಕ್ಕದು ಬರೀ ಪಾಟಿ.
ಪಂಪ ರನ್ನ ಪೊನ್ನ ಜನ್ನರ ಕಾವ್ಯದ ಗಂಟು
ನನಗಂತೂ ಅರ್‍ಥೈಸಿಕೊಳ್ಳಲಾಗದ ಕಗ್ಗಂಟು
ಕನ್ನಡದ ಕಂಪರಿಯದ ಮೂಗಿಗೆ
ದೇವಭಾಷೆಯ ಗಂಧ ಪಸರಿಸುವುದೇ
“ನೀರಿಳಿಯದ ಗಂಟಲಲಿ ಕಡುಬು”
ಮುದ್ದಣ್ಣನ ಉಕ್ತಿ
ನನ್ನ ಪಾಲಿಗಲ್ಲ ಅತಿಶಯೋಕ್ತಿ.
ಕುವೆಂಪು, ಬೇಂದ್ರೆ ಪುತಿನಾರ ಗತ್ತು
ಬ್ರಹ್ಮ ನೀಡಲಿಲ್ಲ ಬುದ್ಧಿಗೆ ಕಸರತ್ತು
ಇನ್ನು ಕಥೆ ಬರೆಯೋಣವೆನಿಸಿತು
ನನ್ನದೇ ಆಸ್ತಿ ಎಂದರು ಮಾಸ್ತಿ
ಕವನ ಗೀಚಿದರೆ ಬಲು ಸುಲಭವೆಂದುಕೊಂಡೆ
ಒಬ್ಬೊಬ್ಬ ಕವಿಗಳು ಎದುರು ಬಂದು
ನನ್ನದೇ ಪದ, ನನ್ನದೇ ಶೈಲಿ
ಅರಚಾಡಿದರು ಕಿವಿ ಮುಚ್ಚಿಕೊಂಡೆ.
ನಾಟಕವಾದರೆ ಹೇಗೆ? ಕಾಳಿದಾಸನ ಹಾಗೆ
ಈ ನಾಟಕ ಪಾಠಕ ಎಲ್ಲಾ ತಲೆಬಿಸಿ
ಹರಿಹರನ ರಗಳೆಯೇ ವಾಸಿ.
ಕಾದಂಬರಿಯೇ ಸರಿ, ಎಲ್ಲರಿಗೂ ಮೋಡಿ
ಆದರೆ ಬರೆಯುವ ಮೂಡಿಲ್ಲ ಬಿಡಿ
ಕುಣಿಯಲಾರದವಳಂದಳಂತೆ ನೆಲಡೊಂಕು
ಇಲ್ಲ ನನ್ನ ಲೇಖನಿಯ ತುದಿಯೇ ಕೊಂಕು.
ನವ್ಯಕಾವ್ಯ ಬರೆದರಾಯ್ತು ಅರ್ಥವಾಗದ ಪರಿ
ಬಲವಾಗಿ ನಿರ್ಧರಿಸಿದೆ ಮನೆಯೇ ಸರಿ
ಹೋದರಾಯ್ತು ಸಂಸಾರದಲ್ಲಿ ತರಾ ‘ವರಿ’
ದುರಾದೃಷ್ಟಕ್ಕೆ ಅಂದೇ ಮುಗಿಯಬೇಕೆ ತರಕಾರಿ
ಪಲ್ಯ ಮಾಡಲಿಲ್ಲವೆಂದು ಗಂಡನ ಮಾರ ಮಾರಿ
‘ಚೂಡಿ’ ತರಲಿಲ್ಲವೆಂದು ಮಗಳ ಕಿರಿಕಿರಿ
ಆಯಿತಲ್ಲ ಬರೆವುದಕ್ಕೆ ಕತ್ತರಿ
ಬರೆಯುವವರು ಬರೆಯಲಿ ಬಿಡಿ
ನನಗೇಕೆ ಈ ಉಸಾಬರಿ.
*****