ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ
ತಾಗುವ ಮೊನೆಗಾಧಾರವಾಗಿ
ದೂರ ಎಯಿದುವುದಕ್ಕೆ ಸಾಗಿಸುವ ಗುಣ ತಾನಾಗಿ
ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ
ಅರಿವು ಕುರುಹು ಎರಡೂ ಬೇಕೆಂದನಂಬಿಗ ಚೌಡಯ್ಯ
[ಅಂಬಿನ-ಬಾಣದ, ಹಿಳಿಕಿನಲ್ಲಿ-ಹಿಂಬದಿಯಲ್ಲಿ, ವಿಹಂಗನ ಹಕ್ಕಿಯ, ಕ್ರೀ-ಕ್ರಿಯೆ, ಕಾಬನ್ನಕ್ಕ-ಕಾಣುವವರೆಗೆ]
ಅಂಬಿಗರ ಚೌಡಯ್ಯನ ವಚನ, ಜ್ಞಾನ ಮತ್ತು ಕ್ರಿಯೆಗಳಿಗೆ ಇರುವ ಸಂಬಂಧವನ್ನು ಈ ವಚನ ವಿವರಿಸುತ್ತದೆ.
ಇಲ್ಲಿ ಒಂದು ರೂಪಕವಿದೆ. ಅದು ಬಾಣದ ರೂಪಕ. ಬಾಣದ ಹಿಳಿಕಿನಲ್ಲಿ ಹಕ್ಕಿಯ ಗರಿಯನ್ನು ಕಟ್ಟಿರುವುದುಂಟು. ಆ ಗರಿಯ ಕಾರ್‍ಯ ಏನೆಂದರೆ ಗುರಿಯನ್ನು ಮುಟ್ಟುವ ಮೊನೆಗೆ ಸಹಾಯಮಾಡುವುದು. ಹಿಂಬದಿಯ ಗರಿಯ ಬೆಂಬಲ, ಸಮತೋಲ ಇಲ್ಲದಿದ್ದರೆ ಬಾಣವು ದೂರ ಹೋಗದು.
ಹಾಗೆಯೇ ಕ್ರಿಯೆ ಎಂಬುದು ಬಾಣ, ಅರಿವು ಅನ್ನುವುದು ಬಾಣದ ಹಿಳಿಕಿನಲ್ಲಿರುವ ಗರಿ ಎಂದು ಚೌಡಯ್ಯ ಹೇಳುತ್ತಾನೆ. ಈ ಅರಿವು ಮತ್ತು ಕ್ರಿಯೆಯ ವ್ಯತ್ಯಾಸವನ್ನು, ಸಂಬಂಧವನ್ನು ಅರಿಯುವವರೆಗೆ ಅರಿವು, ಕುರುಹು (ಸಂಕೇತ, ಲಾಂಛನ) ಎಲ್ಲವೂ ಬೇಕು ಅನ್ನುತ್ತಾನೆ.
ಆಧುನಿಕ ಕಾಲದಲ್ಲಿ ಜ್ಞಾನ (ನಾಲೆಜ್) ಮತ್ತು ಕ್ರಿಯೆ (ಆಕ್ಷನ್) ಕುರಿತು, ಪ್ರಾಕ್ಟಿಸ್ ಮತ್ತು ಥಿಯರಿ ಕುರಿತು ಅನೇಕ ಚರ್ಚೆಗಳು ನಡೆದಿವೆ. ಆಧುನಿಕ ಪೂರ್‍ವ ಕಾಲದಲ್ಲಿ ಜ್ಞಾನ ಮತ್ತು ಕ್ರಿಯೆಗಳ ಸಂಬಂಧ ಕುರಿತು ನಡೆದ ಚರ್ಚೆಯ ನಿದರ್‍ಶನವಾಗಿ ಈ ವಚನ ಕಾಣುತ್ತದೆ.
*****