ಕಾವ್ಯ ಕೋಗಿಲೆ ಹಾಡಿದೆಯೊ
ಸಾಹಿತ್ಯದ ಹೂ ಬನದಲ್ಲಿ
ಗಿರಿ ನವಿಲು ಗರಿ ಬಿಚ್ಚಿದೆಯೊ
ಸಪ್ತಸ್ವರಗಳ ಸೋನೆಯಲಿ
ಪ್ರಕೃತಿಯೆಲ್ಲಾ ಸಿಂಗಾರ
ಕವಿ ಪಂಪ ಕೃತಿ ಹಾಡುವಲಿ
ಸಮಾಜವಾಯಿತು ಬಂಗಾರ
ಬಸವಣ್ಣ ಧ್ವನಿ ಎತ್ತುವಲಿ
ಸುರಿಯಿತೊ ಧೋಧೋ ಮುಂಗಾರು
ಹರಿಹರ ರಗಳೆ ಹಾಡುವಲಿ
ಕನ್ನಡವಾಯಿತು ಹೊನ್ನಾರು
ಬಂಗಾರದ ಬೆಳೆ ಮೂಡುವಲಿ
ಕುಮಾರವ್ಯಾಸ ಧ್ವನಿ ತೆಗೆದ
ಮರಳಿತು ದ್ವಾಪರ ಕಲಿಯುಗಕೆ
ಲಕುಮೀಶ ಜೈಮಿನಿ ನುಡಿದ
ಕವಿಯಾದವು ಕಿವಿ ಗಮಕಕ್ಕೆ
ಬೀದಿ ಬೀದಿಯಲಿ ಸರ್‍ವಜ್ಞ
ಬದುಕು ಆಯಿತು ಬೆತ್ತಲೆ
ದಾಸರು ಸಂತರು ಸ್ವರವಾದಾಗ
ಎಲ್ಲಿ ಹೋಯಿತೊ ಕತ್ತಲೆ
ಹಾಡಿದೆ ಕೋಗಿಲೆ ಹೊಸದಾಗಿ
ಬೇಂದ್ರೆ ಕುವೆಂಪು ರಾಗದಲಿ
ಕುಣಿದಿದೆ ನವಿಲು ನಲಿವಾಗಿ
ನಿತ್ಯೋತ್ಸವದ ಗಾಳಿಯಲಿ
ಹಾಡಿದೆ ಜನಪದ ಕೆಂಪಾಗಿ
ತಗ್ಗು ದಿಣ್ಣೆ ಸಮ ಮಾಡುತಲಿ
ಇಟ್ಟುಕೊಂಡು ಹೊಸ ಎಚ್ಚರ
ಸಂಭ್ರಮಿಸಿದೆ ಕುಣಿದಾಡುತಲಿ
*****