Home / ಕವನ / ಕವಿತೆ / ಸಬ್ಬಂಬು ರಾತೂರಿ

ಸಬ್ಬಂಬು ರಾತೂರಿ

ಸಬ್ಬಂಬು ರಾತೂರಿ ಒಬ್ಬಕ್ಕಿ ನಾ ಇದ್ದ|
ನೀವೆಲ್ಲಿ ಹೋಗಿ ಬಂದ್ರಿಽ| ನೀವೆಲ್ಲಿ ಆಡಿ ಬಂದ್ರಿಽ ||೧||

ಜಾಣಿ | ಬೆಟ್ಟಂಬು ಬ್ಯಾಸಗಿ| ಕಣ್ಣೀಗಿ ನಿದ್ದಿಲ್ಲ|
ತನುಗಾಳಿಗ್ಹೋಗಿದ್ದೇವ| ತನುಗಾಳಿಗ್ಹೋಗಿದ್ದೇವ ||೨||

ಎದಿಯ ಮ್ಯಾಲಿನ ಘಾಯಿ ಎಳಿಯ ಚಂದ್ರಮನಂಗ|
ನೀವೆಲ್ಲಿ ಹಾದು ಬಂದ್ರಿಽ| ನೀವೆಲ್ಲಿ ಹೋಗಿ ಬಂದ್ರಿ ||೩||

ಜಾಣಿ| ಬಾಳಿಽಯ ಬನದಾಗ| ಹಾದು ನಾವ್ಬರುವಾಗ|
ಬಾಳಿಽಯ ಗರಿ ತಾಕ್ಯಾವಽ |ಬಾಳಿಽಯ ಗರಿ ತಾಕ್ಯಾವಽ ||೪||

ಹುಬ್ಬ ಹುಬ್ಬಿನ ಘಾಯಿ ಹುಬ್ಬೆಲ್ಲ ಚ್ಯೂರು ಘಾಯಿ|
ನೀವೆಲ್ಲಿ ಹೋಗಿ ಬಂದ್ರಿಽ | ನೀವೆಲ್ಲಿ ಆಡಿ ಬಂದ್ರಿ ||೫||

ಜಾಣಿ | ತ್ವಾಟಿದಾಗಽ ಇರುವ| ನೀಟುಳ್ಳ ಗಜನಿಂಬಿ|
ಗಜನಿಂಬಿ ಗರಿ ತಾಕ್ಯಾವಽ |ಗಜನಿಂಬಿ ಗರಿ ತಾಕ್ಯಾವಽ ||೬||

ನಾರ್ಯಾರ್ಹಚ್ಹಲ್ಲಪುಡಿ| ನಾರ್ಯಾರ್ಹಚ್ಹಲ್ಲಪುಡಿ|
ನಿಮ್ಹಲ್ಲಿಗ್ಯಾಕ್ಹತ್ಯಾವರೀ| ನಿಮ್ಹಲ್ಲಿಗ್ಯಾಕ್ಹತ್ಯಾವರೀ ||೭||

ಜಾಣಿ| ಗೊಲ್ಲರ ಓಣ್ಯಾಗ ಹಾದು ನಾವ್ಬರುವಾಗ|
ಅವರು ಹಲ್ಲಿಗಿ ತಂದ್ಹಚ್ಚಿದರಽ|ಅವರು ಹಲ್ಲಿಗಿ ತಂದ್ಹಚ್ಚಿದರ ||೮||

ಹತ್ತ ವಾರಿಽನ ಹೂವಿನಽ ಶಾಲ್ಗೋಳು|
ಮತ್ತ್ಯಾಕ ಮಾಸಿದವರಿ| ಮತ್ತ್ಯಾಕ ಬೆವತಿದವರಿ ||೯||

ಜಾಣಿ| ಗರಡಿಽಯ ಮನಿಯಾಗ| ಸಗತಿ ನಾ ಹೊಡಿಯಾಗ|
ಕಿರಿಬೆವರ ಬಿಟ್ಟಿದಾವಽ| ಕಿರಿಬೆವರ ಬಿಟ್ಟಿದಾವ ||೧೦||

ಹತ್ತ ವಾರಿಽನ ಮುತ್ತಿಽನ ನಡಕಟ್ಟ|
ಮತ್ತ್ಯಾಕ ಮಾಸಿದವರಿ| ಮತ್ತ್ಯಾಕ ಬೆವತಿದವರಿ ||೧೧||

ಜಾಣಿ| ಚೆಂಡಾಟ ನಾಡಿದಾಗ| ಕೃಷ್ಣರು ಬಂದ್ಹಿಡಿಯಾಗ|
ಬಿದ್ದಲ್ಲಿ ಮಾಸಿದಾವಽ| ಬಿದ್ದಲ್ಲಿ ಮಾಸಿದಾವ ||೧೨||

ಎಷ್ಟೆಂತ ಹೇಳಲಿ ಎಷ್ಟೆಂತ ಕೇಳೂತಿ|
ಕೃಷ್ಣರ ದೇಶಕ್ಹೋಗಿದ್ದೇವಽ| ಕೃಷ್ಣರ ದೇಶಕ್ಹೋಗಿದ್ದೇವಽ |೧೩||

ಭಾಳ ಭಾಳ ಮಾತಾಡತೀದಿ ಬಾಯ್‌ ಪಾಟ್ಲೆ ಬೈತೀದಿ|
ರಂಗಽಗಿ ಬಂದಿ ನೀನು| ಭಾಳ ಪೆಟ್ಟಿಽಗಿ ಬಂದಿ ನೀನು ||೧೪||

ಊರ ಹೊರಗಿನ ನಿಷ್ಠುಳ್ಹಣಮನ ಮುಂದ|
ಆಣಿ ಮಾಡುಣು ನಡಿಯ| ಆಣಿ ಮಾಡೂಣು ನಡಿಯ ||೧೫||
*****

ಹಿಂದಿನ ಹಾಡಿನಂತೆ ಇದರಲ್ಲಾದರೂ ಕ್ರಮದಿಂದ ಪ್ರಶ್ನೋತ್ತರಗಳಿವೆ. ಇಂಥದೊಂದು ಹಾಡು ಗೀತಗೋವಿಂದದಲ್ಲಿದೆ. (“ರಜನಿ ಜನಿತ ಗುರು ಜಾಗರ”.) ರಸಿಕರಿಗೆ ಈ ಹಾಡಿನ ರಹಸ್ಯವು ಸ್ಪಷ್ಟನೇ ಇದೆ. ರೂಢ ಶಬ್ದಗಳ ಅರ್ಥವನ್ನು ಮಾತ್ರ ಇಲ್ಲಿ ಹೇಳಿದೆ.

ಛಂದಸ್ಸು:- ತ್ರಿಪದಿಗೆ ಸಮೀಪನಾದುದು.

ಶಬ್ದಪ್ರಯೋಗಗಳು:– ಸಬ್ಬಂಬು ರಾತೂರಿ = ಕಟ್ಟಿರುಳು, ಬೆಟ್ಟೆಂಬು ಬ್ಯಾಸೀಗಿ=ಕಡುಬೇಸಗೆ. ತನುಗಾಳಿ=ತನುವುಳ್ಳ ಗಾಳಿ ಅಥವಾ ತಂಗಾಳಿ. ಘಾಯ=ಗಾಯ. ಚ್ಯೂರು=ಚಿವುರು. ಹತ್ತು ವಾರ=ಹತ್ತು ಗಜ. ಸಗತಿ ಹೊಡಿ=ಸಾಮು ತೆಗೆ. ಕೃಷ್ಣರು=ಕೃಷ್ಣನಂಥ ಗೆಳೆಯರು(?). ಬಾಯ್‌ ಪಾಟ್ಲೆ=ಮುಖೋದ್ಗತವಾಗಿ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...