ನನ್ನ ಶಾರದ ಮಾತೆ
ಪ್ಯೂರ್ ವೆಜಿಟೇರಿಯನ್
ಭಾನುವಾರ ಮಾತ್ರ
ನಾನ್ ವೆಜಿಟೇರಿಯನ್!

ಅವಳ ಕೈಯಲ್ಲಿ ವೀಣೆ| ಈಚೆಗೆ
ಕಲಿತಿಹಳು ಸಹ ತಮಟೆ
ಭರತ ನಾಟ್ಯದ ಜೊತೆಗೆ
ಹುಲಿವ್ಯಾಸದ ಕುಣಿತ

ನನ್ನ ಶಾರದೆಗೆ ಪ್ರೀತಿ
ಕರ್‍ನಾಟಕ ಸಂಗೀತ
ಇಂದು ಅವಳಿಗೆ ಪ್ರೀತಿ
ಕನ್ನಡದ್ದೆಲ್ಲ ಸಂಗೀತ

ಎಲ್.ಕೆ.ಜಿ.ಯ ಹಳೆ ಶಾರದೆಗೆ
ಬೆವರಿಗೆ ಮಿಗಿಲು ಬುದ್ಧಿ
ಯು.ಜಿ.ಸಿ.ಯ ಹೊಸ ಶಾರದೆಗೆ
ಬೆವರಿಗೆ ಸೇವಕ ಬುದ್ಧಿ

ನನ್ನ ಶಾರದೆಗೆ ಪ್ರಿಯವು
ಪ್ರಮಾಣ ಬದ್ಧ ಕನ್ನಡ
ಈಚೆಗೆ ಹೇಗೊ ಪ್ರಿಯವು
ನೂರು ಸೊಗಡಿನ ಕನ್ನಡ

ಬಿಳಿ ಸೀರೆಯ ಆ ದೇವಿ
ಹರಕಲು ಸೀರೆಗೆ ದೂರ
ಇಂದು ಅದಕೆ ಒಲಿದಿಹಳು
ತೋರಿ ಮರುಕ ಅಪಾರ

ಅಪ್ಪನ ಕಾಲದ ಶಾರದೆಗೆ
ಅಪ್ಪ ಬೇಕು ಸೇವೆಗೆ
ನಾನೊಪ್ಪಿದ ಈ ಕಾಲಕ್ಕೆ
ಎಲ್ಲರು ಎಲ್ಲರ ಸೇವೆಗೆ

ತನ್ನ ನೆಲೆ ವಿಸ್ತರಿಸಿ
ಮೆರೆದ ಶಾರದ ಮಾತೆ
ಮಕ್ಕಳೆಲ್ಲರಿಗೂ ಯಾಕೆ
ಅಲ್ಲ ಆದರ್ಶದಾತೆ?
*****