ಹೂಕೋಸಿನ ರೂಪ ಬಣ್ಣದಲಿ
ಮನ ಲೀನ, ಮಲಿನ.
ಹೆಚ್ಚುತ್ತಾ ಮೆಚ್ಚುತ್ತಾ ಅದರ
ಬುಡದಲ್ಲೇ ಹರಿವ
ಪಿತಿಪಿತಿ ಹುಳು
ಕಂಡರೂ ಕಾಣದಂತೆ
ಚೆಲುವಿನಾರಾಧನಾ ಧ್ಯಾನ
ಪೀಠಸ್ಥ ಆದೇಶಕ್ಕೆ ಮಹಾಮೌನ.
ದಂಟು ಬೇಳೆ ಬೇಯಿಸಿ ಬಸಿದು
ಮೆಣಸು ಮಸಾಲೆ ಖಾರ
ಹದ ಬೆರೆಸಿ ಕುದಿಸಿ ಒಗ್ಗರಿಸಿ
ಬಸ್ಸಾರಿನ ರಸಗಂಧವ
ಆಘ್ರಾಣಿಸಿ ಹೀರಿ
ಕರುಳಿನಾಳದ ಬಾಯ್ಚಪ್ಪರಿಕೆ
ಮಹಾರಸದುನ್ಮಾದ ಧ್ಯಾನ
ಅಮಲಿನಲಿ ಮೈಮರೆವು
ಹೊರಳು ದಾರಿಯಲಿ ತಿಳಿವು.
ಬೆಳ್ಳುಳ್ಳಿ ಒಗ್ಗರಣೆ ಘಮ ಮೂಗಿಗಡರಿ
ಆ ಗಂಧದ ಬೆನ್ನು ಹಿಡಿದು
ಗಾಳಿಯಲೆಗಳ ಮೇಲೆ ಸವಾರಿ
ಬೀಸಿ ಕೆಡವುತ್ತದೆ ವಾಸನಾ ಧ್ಯಾನ
ತಪ್ಪುತ್ತದೆ ಪ್ರಭುತ್ವ ನಿರ್ದೇಶಿತ ದಾರಿ
ನಡೆದ ದಾರಿಯೇ ಸರಿ.
ಸಬ್ಬಸಿಗೆ ಸೊಪ್ಪಿನ
ವಿನ್ಯಾಸಕ್ಕೆ ಮೃದು ಸ್ಪರ್ಶಕ್ಕೆ
ಅದೆಂಥಾ ನವುರು ಮುದ.
ಮೃದುವಾಗಿ ಮುಟ್ಟುತ್ತಾ
ಆವರಿಸುವ ಆವಾಹಿಸುವ
ಹಿತವಾದ ಮಿಡಿತ
ಕಾಡುತ್ತದೆ ಅದೇ
ಸ್ಪರ್ಶಸುಖದ ಧ್ಯಾನ
ಅನುಭವಕ್ಕೇ ಬದ್ಧ ಮನ.
ಹೆಚ್ಚಲು ಕೈಗೆತ್ತಿಕೊಂಡ
ಈರುಳ್ಳಿಯ ಮೂಲ ಕಾಡಿ
ಪಕಳೆ ಪಕಳೆಗಳ ಬಿಡಿಸುತ್ತಾ ಹೋದಂತೆ
ಅದರಲ್ಲೇ ತಲ್ಲೀನ
ಆ ಕೌತುಕಕ್ಕೇ ಸೋತು
ಆವರಿಸುತ್ತದೆ ವಿಸ್ಮಿತ ಧ್ಯಾನ
ಅಳಿಸಿಹೋಗುತ್ತದೆ ಯಾರೋ ಬರೆದಿಟ್ಟ
ಅಲೌಕಿಕ ದಿವ್ಯ ಪುರಾಣ.
ಈ ನಿತ್ಯ ಪ್ರೀತಿಯ
ರೂಪ ರಸ ಗಂಧ ಸ್ಪರ್ಶ ವಿಸ್ಮಯಗಳ
ಮಾನುಷ ಸಹಜ ಧ್ಯಾನದಲಿ
ಅನುಕ್ಷಣದ ಎಚ್ಚರ
ಮತ್ತೆ ಮತ್ತ ಮೈಮರೆವಿನ
ಹುಚ್ಚು ಮೋಹದ ಜೂಟಾಟ.
ನಿಲುಕಲಾರದ ಎತ್ತರದಲೇ ಇರಲಿ ಬಿಡು
ಅವರಿಟ್ಟ ಸಂತ ಪೀಠ.
ನನಗಾಗಿ
ಈ ನೆಲದಲ್ಲೇ ಹೀಗೇ
ಈ ಕ್ಷಣ.
*****