ಹಗಲು ಅಂಬಾರಿಯ ಮೇಲೆ
ಮೆರವಣಿಗೆ ಹೊರಟಿತ್ತು ಬೀದಿಯಲಿ
ಹೆಗಲು ಕೊಟ್ಟವರ ಎದೆಯ ಮೇಲೆ
ಬಹುಪರಾಕು ಬರೆದಿತ್ತು ನೆತ್ತರಲ್ಲಿ.
ದಾರಿ ಬಿಡಿರೊ ಅಣ್ಣ ದಾರಿ ಬಿಡಿರೊ
ಹಗಲು ರಾಜನಿಗೆ ದಾರಿ ಬಿಡಿರೊ
ಬಾಯಿ ಬಿಡಿರೊ ಅಣ್ಣ ಬಾಯಿ ಬಿಡಿರೊ
ನಗಲು ನೀವೆಲ್ಲ ತೆರಿಗೆ ಕೊಡಿರೊ.
ಇಲ್ಲಿ ಬೀದಿಗಳೆಲ್ಲ ಬೆವರ ಬಂದೀಖಾನೆ
ಹಗಲು ರಾಜನಿಗೆ ಬೆತ್ತಲೆ ಕಿರೀಟ
ಎತ್ತ ನೋಡಿದರತ್ತ ಚಿತ್ತಾದ ಬದುಕು
ಬಯಲು ಬೆಳಕಿಗೆ ಇಲ್ಲಿ ಕತ್ತಲೆ ಕಾಟ.
ಕದ್ದು ಕೂತಿರುವ ಕತ್ತಲ ತೋಳ
ಹಾರಿ ಬಂದೀತು ಹೆಗಲ ಮೇಲೆ
ಜಿದ್ದು ಜೀವನವಾಗಿ ಸ್ಪರ್ಧೆ ಹುಟ್ಟಿದೆ ಇಲ್ಲಿ
ನೆಗೆದು ಕೂತೀತು ಹೆಗಲ ಮೇಲೆ.
ಹಗಲ ಹಾದರದಲ್ಲಿ ಹುಟ್ಟಿಬಂದವರ
ಕತ್ತಲಿನ ಕಾಮಕ್ಕೆ ತುತ್ತಾದ ಬಾಂಧವರೆ
ಸುಟ್ಟು ಕರುಕಾದ ಹೊಟ್ಟೆ ಹೊತ್ತವರೆಲ್ಲ
ಒಂದಾಗಿ ಬದುಕುವುದೇ ಬೇವು ಬೆಲ್ಲ.
*****