ಬೆರಳು ಕತ್ತರಿಸಿ
ಕರುಳ ಕದ್ದವರು
ಮರುಳು ಮಾಡಿದರು ಮಾತನ್ನು
ನಡೆದ ಕಡೆಯೆಲ್ಲ
ನೆರಳ ನೆಟ್ಟವರು
ಮಸುಕು ಮಾಡಿದರು ಮನಸನ್ನು.
ಬೆರಳು ಕೊಟ್ಟವರೆ ಕರುಳ ಕೇಳುವ
ಕಾಲ ಬಂತೆ ಈಗ!
ಬೆರಳು-ಕರುಳುಗಳ ರಾಜಕೀಯದಲಿ
ಬತ್ತಿಹೋಯಿತೆ ರಾಗ!
ಆರ್‍ಜುನ ದೇವನ ಬಿಲ್ಲಿನ ತುದಿಗೆ
ಕೊಳ್ಳಿ ಕಾರುವ ಬಾಣಗಳು
ಏಕಲವ್ಯನ ಬೆನ್ನಿನ ಮೇಲೆ
ಪಾಠ ಕೇಳುವ ಪ್ರಾಣಗಳು!
ಸ್ವಂತ ಸಸಿಗಳಿಗೆ ಜೋಗುಳ ಹಾಡಿ
ಸಂತರಾದವರು ಎಲ್ಲಿ?
ಕೊಳ್ಳಿದೆವ್ವಗಳ ಕಾಲ ಕುಣಿತಕೆ
ಮೌನವಾದವರು ಎಲ್ಲಿ?
*****