ಬೀದಿ ಬದಿಯಲ್ಲಿ ಬಿದ್ದ ಹೆಣ ನಾನು
ಶತಶತಮಾನದ ಕತೆಗಾರ
ಕತ್ತಲು ಬೆಳಕಿನ ಕಾಳಗ ನಡೆದು
ಸಾವಿರ ಸಾವಿನ ಸರದಾರ.
ರಾಜರ ನಡುವೆ ನಡೆಯಿತು ಯುದ್ಧ
ಸಿಂಹಾಸನದ ಸಲುವಾಗಿ
ಕುದುರೆಯ ಗೊರಸು ಕತ್ತಿಯ ಬಿರುಸು
ಬಿದ್ದೆನು ಕೆಳಗೆ ನೆಲವಾಗಿ.
ನೆಣ ನೆತ್ತರಿನ ಓಕುಳಿ ನಡುವೆ
ನಕ್ಕರು ರಾಜರು ಠೀವಿಯಲಿ
ನರಳಿದ ಕಾಲವು ಉರುಳುತ ಮುಂದೆ
ಬರೆಯಿತು ಕತೆಯನು ಕೋವಿಯಲಿ
ಓಟಿನ ಪೆಟ್ಟಿಗೆ ಪೀಠದ ಇಟ್ಟಿಗೆ
ನಡುವಿನ ನೆತ್ತರ ದನಿ ನಾನು
ಹಿಂದೂ ಮುಸ್ಲಿಂ ಸಿಖ್ಖರು ಕ್ರೈಸ್ತರು
ಎಲ್ಲರಿಗೊಂದೇ ಕತೆ ನಾನು.
*****