Medea ಯೂರಿಪಿಡಿಸ್ ಬರೆದ ದುರಂತ ನಾಟಕ. ಗ್ರೀಕ ದಂತಕಥೆಗಳಲ್ಲಿ ಬರುವ ಮೆಡಿಯಾ Euripides ಈ ನಾಟಕದ ಪ್ರಮುಖ ಪಾತ್ರ. Medea ಧೈರ್ಯಶಾಲಿ, ಬುದ್ಧಿವಂತೆ. ಶಾಂತ ಮನಸ್ಸಿನ ಸದ್ಗುಣಿ, ಕಷ್ಟಕ್ಕೆ ಕಣ್ಣೀರು ಹರಿಸುವ ಹೆಣ್ಣಲ್ಲ ಆಕೆ. ಏಸಿಯಾ ಮೂಲದ ಆಕೆ ಸೂರ್ಯವಂಶಸ್ಥನಾದ ರಾಜ Heliosನ ಮೊಮ್ಮಗಳು. ಆಕೆಯ ಮೋಹ ಪ್ರೇಮಗಳು ಕೂಡ ಆವಳದೇ ರೀತಿಯಲ್ಲಿ ವಿಭಿನ್ನ. ಚಾಣಾಕ್ಷೆಯಾದ ಆಕೆ ಮಾಂತ್ರಿಕ ಶಕ್ತಿಯನ್ನು ಹೊಂದಿದವಳು.
ಒಬ್ಬ ತಾಯಿಯಾಗಿ ಪತ್ನಿಯಾಗಿ ತನ್ನ ಹೆಣ್ತನದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಆಕೆ ಆದರ್ಶ ಹೆಣ್ಣು. ಆದರೆ ವಿಧಿಯ ಆಟ. ಪತಿಯಾದ Jason ಆಕೆಯ ನಂಬಿಕೆಗೆ ಪ್ರೀತಿಗೆ ಮೋಸ ಮಾಡುತ್ತಾನೆ. Jasonಗಾಗಿ ತನ್ನ ತಂದೆ ತಾಯಿ ತಾಯ್ನಾಡನ್ನು ಬಿಟ್ಟು ಬಂದ ಅವಳು ಈಗ ಅವನಿಂದಲೇ ಪರಿತ್ಯಕ್ತಳಾಗುವ ಸಂದರ್ಭ ಬಂದಿದೆ. Jasonಗಾಗಿ ಆಕೆ King Peliasನನ್ನು ಆತನ ಪುತ್ರಿಯರೇ ಕೊಲ್ಲುವಂತೆ ಮಾಡಿದ್ದಾಳೆ. ಆತನನ್ನು ವಿವಾಹವಾಗಿ ತನ್ನ ನಾಡು ಬಿಟ್ಟು ಬಂದ ಆಕೆ ಗ್ರೀಸನ Corinthಗೆ ಬಂದಿದ್ದಾಳೆ. ಆದರೆ ಈಗ ಜೆಸನ್ ರಾಜ್ಯ ಸಂಪತ್ತಿನ ಆಶೆಗೆ Corinthನ ರಾಜ King Creonನ ಮಗಳನ್ನು ಮದುವೆಯಾಗಲು ಉದ್ದೇಶಿಸಿದ್ದಾನೆ. ಮೇಡಿಯಾಳನ್ನು ತುಚ್ಛವಾಗಿ ನಿಕೃಷ್ಟವಾಗಿ ಹೀಯಾಳಿಸುತ್ತಾನೆ. ಇದಾಕೆಗೆ ಸಹನೆಯಾಗದು. ಜೊತೆಗೆ ಆಕೆಯ ಮಾಂತ್ರಕ ಶಕ್ತಿಗೆ ಬೆದರಿದ King Creon ಕೂಡ Corinth ಬಿಟ್ಟು ಹೊರಟು ಹೋಗಲು ಹೇಳುತ್ತಾನೆ. ಈಗಾಕೆಗೆ ಅನ್ಯ ಮಾರ್ಗವಿಲ್ಲ. ಅಸಹಾಯಕ ಸ್ಥಿತಿಯಲ್ಲಿ ಆಕೆ ಕಠಿಣ ಹೃದಯಿಯಾಗುತ್ತಾಳೆ. ಧೃತಿಗೆಡದೆ ಸೇಡಿನ ಜ್ವಾಲೆಯಲ್ಲಿ ಉರಿಯುವ ಕೆಂಡದಂತಾಗುತ್ತಾಳೆ.
ಆದರೆ ತನ್ನ ಸೇಡನ್ನು ತೋರ್ಪಡಿಸದೇ ಜಾಣ್ಮೆಯಿಂದ ತೀರಿಸಿಕೊಳ್ಳಲು ನಾಟಕವಾಡುತ್ತಾಳೆ. ರಾಜ King Creon ತನ್ನ ಮಾತನ್ನು ನಂಬುವಂತೆ ನಟಿಸುತ್ತಾಳೆ. ತಾನು ದಡ್ಡಳೆಂದು Jason ಆತನ ಮಗಳನ್ನು ಮದುವೆಯಾಗುವುದೇ ನ್ಯಾಯವೆಂದು ನುಡಿದು ಓಲೈಸಿ ನಾಡು ತೊರೆದು ಹೋಗಲು ಒಂದು ದಿನದ ಹೆಚ್ಚಿನ ಕಾಲಾವಕಾಶ ಕೇಳುತ್ತಾಳೆ. ಈ ಮಧ್ಯೆ ಜೇಸನ್‌ನ ಕರೆದು ಮದುಮಗಳಿಗೆ ಹೊಸ ಉಡುಪನ್ನು ಕಾಣಿಕೆಯಾಗಿ ನೀಡಲು ಅನುಮತಿ ಪಡೆಯುತ್ತಾಳೆ. ತನ್ನ ಮಕ್ಕಳ ಕೈಯಿಂದಲೇ ವಿಷಲೇಪಿತ ಹೊಸ ಕಿರೀಟ ಮತ್ತು ಉಡುಪೊಂದನ್ನು ನೀಡುತ್ತಾಳೆ. ಉಡುಪು ಧರಿಸಿದ ಯುವರಾಣಿ ಮರುಕ್ಷಣವೇ ಮಡಿಯುತ್ತಾಳೆ. ಅವಳನ್ನು ಆವೇಶದ ಭರದಲ್ಲಿ ಅಪ್ಪಿದ ತಂದೆ King Creon ಕೂಡ ವಿಷಪ್ರಾಶನವಾಗಿ ಅಲ್ಲಿಯೇ ಸಾಯುತ್ತಾನೆ. ಇಷ್ಟಾದರೂ ಆಕೆಯ ಸೇಡು ತೀರುವುದಿಲ್ಲ. Jasonಗೆ ಮುಂದಾವ ವಂಶೋದ್ಧಾರಕನೂ ಇರಬಾರದೆಂದು ತನ್ನ ಸ್ವಂತ ಮಕ್ಕಳನ್ನೆ ಕೊಲ್ಲುತ್ತಾಳೆ. ಆದರೆ ಆಕೆಯ ಮಾತೃಹೃದಯದ ವಿಲಾಪ ಮಾತ್ರ ಮನಸ್ಸನ್ನು ಕಲಕುತ್ತದೆ. ಆದಾಗ್ಯೂ ಪ್ರತಿಕಾರದ ದಳ್ಳುರಿಗೆ ಅರ್ಧಬೆಂದ ಆಕೆ ಅದರಲ್ಲಿಯೇ ಧಹಿಸಿಕೊಳ್ಳಲು ಬಯಸುತ್ತಾಳೆ. ಆತನ ಪ್ರೀತಿಪಾತ್ರರನ್ನು ಮೋಸದಿಂದ ಕೊಂದು ಆತನನ್ನು ಏಕಾಂಗಿಯನ್ನಾಗಿಸುತ್ತಾಳೆ. ತನ್ನವರನ್ನೆಲ್ಲಾ ತೊರೆದು ಬಂದ ತನ್ನನ್ನು ಏಕಾಂಗಿಯನ್ನಾಗಿಸಿದ ಆತನ ಮೇಲಿನ ದ್ವೇಷವೇ ಇದಕ್ಕೆಲ್ಲಾ ಕಾರಣ. ಕೊನೆಯಲ್ಲಿ ಆತನ ಮಕ್ಕಳ ದೇಹವನ್ನು ಆತನಿಗೆ ನೀಡದೆ ತನ್ನ ತಾಯ್ನಾಡಿಗೆ ಕೊಂಡೊಯ್ಯುವ ಆಕೆ ತನ್ನನ್ನು ಎಂದಿಗೂ ಒಪ್ಪದ ನಾಡಿನಲ್ಲಿ ತನ್ನ ಮಕ್ಕಳ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ. Corinth ರಾಜ್ಯದಲ್ಲಿ ಆಕೆ ಪರಕೀಯಳಾಗಿ ಪರಿಗಣಿಸಲ್ಪಡುತ್ತಾಳೆ. ಮುಂದೆ ಅಲ್ಲಿಯೂ ತ್ಯಕ್ತೆಯಾಗಾದ ವಿಹ್ವಲಿತಳಾಗುತ್ತಾಳೆ.
Jasonನನ್ನು ಪ್ರೀತಿಸಿ ಆತನಿಗಾಗಿ ತನ್ನವರನ್ನು ಕೊಂದು, ತ್ಯಜಿಸಿ ಬಂದ ಆಕೆ, ಆತನ ಮೇಲಿನ ಸೇಡಿಗಾಗಿ ಕುಡಿಗಳನ್ನೆ ನಾಶಮಾಡುವುದು ಒಂದರ್ಥದಲ್ಲಿ ಆಕೆಯ ದುರಂತ ಬದುಕನ್ನು ಬಿಂಬಿಸುತ್ತದೆ. ತನ್ನನ್ನು ತ್ಯಜಿಸಿ ಅವಮಾನಿಸಿದ ಪುರುಷನ ವಿರುದ್ದ ಆಕೆಯ ಹೋರಾಟ ಸ್ತ್ರೀ ಬಂಡಾಯದ ಕಹಳೆ ಊದುತ್ತದೆ, ಅದು ಕ್ರೀಸ್ತಪೂರ್ವದಲ್ಲಿಯೇ.ಒeMedeaಳ ಯೋಜನೆಗಳು ಪುರುಷ ಸಾಮ್ರಾಜ್ಯದ ವಿರುದ್ಧ ಯುದ್ಧವೆಂದೆ ಹೇಳಬಹುದು. ನಾಟಕದ ಉದ್ದಕ್ಕೂ ಮೆಡಿಯಾ ನಾಯಕಿಯಾಗಿ ಮಿಂಚುತ್ತಾಳೆ. ಸದಾ ಸ್ತ್ರೀಯರ ಶೀಲದ ಕುರಿತು ನಂಬಿಕೆಯ ಕುರಿತು ಮೋಸದ ಕುರಿತು ಮಾತನಾಡುವ ಗಂಡಿನ ದಬ್ಬಾಳಿಕೆಯನ್ನು ಅದನ್ನು ಮೆಟ್ಟಿ ನಾಶಗೈಯುವ ಹೆಣ್ಣಾಗಿ Medea ವಿಜೃಂಬಿಸುತ್ತಾಳೆ.
Medea ಕಾಲಾತೀತವಾದ ಮಾನವನ ಬದುಕಿನ ಚಿತ್ರಣವನ್ನು ಪ್ರತಿಫಲಿಸುತ್ತದೆ. ಪ್ರಮುಖಪಾತ್ರಗಳು ನಾಯಕತ್ವದ ಗುಣವನ್ನು ಹೊಂದಿವೆ. ಅವರು ನಮ್ಮಂತವರಲ್ಲ. ಶ್ರೇಷ್ಟ ಪುರುಷರು ಆದರೂ ಮಾನವ ಭಾವವಿಕಾರಗಳಿಂದ ಹೊರತಲ್ಲ. ಮೆಡಿಯಾ ಎರಡು ಪ್ರಮುಖ ವ್ಯಕ್ತಿಗಳ ಕಥೆಯೆಂದೆ ಹೇಳಬೇಕು. ಅವೆರಡು ಒಂದು ಕಾಲಕ್ಕೆ ಪ್ರೇಮದ ಉತ್ತುಂಗದಲ್ಲಿ ತೇಲಾಡುವ ಪಾತ್ರಗಳು. ತಮ್ಮ ಬಯಕೆಯ ಈಡೇರಿಕೆಗಾಗಿ ಆಶೆಗಾಗಿ ಕಾರುಣ್ಯರಹಿತರಾಗಿ ಎಲ್ಲವನ್ನೂ ತ್ಯಜಿಸುವ, ಇನ್ನೊಬ್ಬರನ್ನು ಬಲಿಕೊಟ್ಟು ಅಪರಾಧಗಳ ಸುಳಿಯಲ್ಲಿ ಬಂಧಿಯಾಗುತ್ತ ಕೊನೆಗೂ ಏನನ್ನು ಸಾಧಿಸಲಾಗದೇ ತೊಳಲಾಡುವ ಪಾತ್ರಗಳು. ಒಂದು ಕಾಲಕ್ಕೆ ತಮ್ಮ ಪ್ರೇಮ ಸಾಫಲ್ಯಕ್ಕೆ ಬಳಲಿದ ಪಾತ್ರಗಳೇ ಕೊನೆಗೆ ತಮ್ಮ ಸ್ವಂತ ಹಿತಾಸಕ್ತಿಗೆ ಬಲಿಬಿದ್ದು ಪರಸ್ಪರ ವಿರೋಧಿಗಳಾಗುವುದು ನಾಟಕದ ಸ್ವಾರಸ್ಯ.
ಅದು ಕ್ರಿಸ್ತಪೂರ್ವ ೫೦೦ರ ಆಸುಪಾಸು. ಶ್ರೇಷ್ಟ ಗ್ರೀಕ ನಾಟಕಕಾರರಾದ ಸೋಪೋಕ್ಲೀಸ್, ಆಸ್ಕಿಲಸ್, ಯೂರಿಪಿಡಿಸ್, ಅರಿಸ್ಟೋಫೆನ್ಸ್ ಮುಂತಾದವರ ಕೈಯಲ್ಲಿ ಗ್ರೀಕ ನಾಟಕಗಳು ಪರಿಪಕ್ವತೆಯನ್ನು ಪಡೆದು ಪ್ರದರ್ಶನಗೊಳ್ಳಲಾರಂಭಿಸಿದವು. ಗ್ರೀಕ ದಂತಕಥೆಗಳಲ್ಲಿ ಬರುವ ಪಾತ್ರಗಳು ಸಂಸ್ಕರಣೆಗೊಂಡು, ಹೊಸ ತೊಗಲು ಧರಿಸಿ, ನಾಟಕದಲ್ಲಿ ಮಿಂಚಲಾರಂಭಿಸಿದ್ದವು.
ಅಥೆನ್ಸನ ಬಯಲು ನಾಟಕ ರಂಗಗಳಲ್ಲಿ ಅದರಲ್ಲೂ The Great Dionysiaದಲ್ಲಿ ಪ್ರತಿವರ್ಷ ವಾರ್ಷಿಕ ನಾಟಕೋತ್ಸವಗಳು ಜರಗುತ್ತಿದ್ದವು. ಆ ಸಂದರ್ಭದಲ್ಲಿ ಶ್ರೇಷ್ಟ ಸುಖಾಂತ ಹಾಗೂ ದುಃಖಾಂತ ನಾಟಕಗಳಿಗೂ, ನಾಟಕಕಾರರಿಗೂ ಗೌರವ ಸಮರ್ಪಣೆಯಾಗುತ್ತಿದ್ದವು. ನಾಟಕೋತ್ಸವಗಳಲ್ಲಿ ಹೆಂಗಸರಿಗೂ ಮಕ್ಕಳಿಗೂ ವೀಕ್ಷಣೆಯ ಅವಕಾಶವಿದ್ದು ಹೊರ ಪಟ್ಟಣದ ಜನರಿಗೂ ನೋಡಲು ವ್ಯವಸ್ಥೆಗಳು ಇದ್ದವು. ಹೀಗಾಗೇ ಅಥೆನ್ಸ ಆ ಕಾಲಕ್ಕೆ ಪ್ರಜಾಪ್ರಭುತ್ವದ ಸಾಂಕೇತಿಕ ಸ್ಥಳವಾಗಿ ಪ್ರತಿನಿಧಿಸಲ್ಪಟ್ಟಿತ್ತು. ಪ್ರಜೆಗಳ ಶ್ರೇಷ್ಟ ಗುಣ ನಡತೆ, ಆದರ್ಶ ಆಡಳಿತಗಾರನ ಕುರಿತು ವಿಷಯವಸ್ತುವನ್ನು ಹೊಂದಿರುತ್ತಿದ್ದ ನಾಟಕಗಳು ಹೇರಳ ಪ್ರಜಾಪ್ರತಿನಿಧಿತ್ವದ ನಾಗರಿಕ ಹಕ್ಕುಗಳ ಕರ್ತವ್ಯಗಳ ಕುರಿತು ಚರ್ಚಿಸುತ್ತಿದ್ದವು. ಬಯಲು ನಾಟಕ ರಂಗಗಳು ಪ್ರೇಕ್ಷಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಸುತ್ತಲೂ ಕಲ್ಲಿನಿಂದ ನಿರ್ಮಿತವಾದ ಗ್ಯಾಲರಿಗಳನ್ನು ಹೊಂದಿದ ವಿಶಾಲವಾದ ಮೈದಾನದಲ್ಲಿದ್ದು ಇಂದಿನ ಕ್ರೀಡಾಂಗಣದ ಮಾದರಿಯಲ್ಲಿ ಇರುತ್ತಿದ್ದವು.
ಇನ್ನು ಪಾತ್ರಧಾರಿಗಳು ತಮ್ಮ ದುರಂತಪಾತ್ರಕ್ಕೋ ಇಲ್ಲ ಹಾಸ್ಯಪಾತ್ರಕ್ಕೋ ಒಪ್ಪುವ ರೀತಿಯ ಮುಖವಾಡಗಳನ್ನು ಧರಿಸುತ್ತಿದ್ದರು. ನಾಟಕದ ಉಪಕರವಾಗಿ ಕೋರಸ್ ಇದ್ದು ಕತೆಯನ್ನು ವಿಸ್ತರಿಸುವಲ್ಲಿ, ವಿಮರ್‍ಶಿಸುವಲ್ಲಿ, ಸಂದರ್ಭಕ್ಕೆ ತಕ್ಕಂತೆ ಬಳಸಲ್ಪಡುತ್ತಿತ್ತು.
ಯೂರಿಪಿಡಿಸ್ Euripides ಜಗತ್ತಿನ ಶ್ರೇಷ್ಟ ನಾಟಕ ಕಾರರಲ್ಲಿ ಒಬ್ಬ. ವ್ಯಕ್ತಿಯಲ್ಲಿಯ ಭಾವಸೂಕ್ಷ್ಮತೆ, ಅಂತರ್‍ಗತ ಸಂವೇದನೆಗಳನ್ನು, ತಳಮೂಲದ ಪರಿಕಲ್ಪನೆಯೊಂದಿಗೆ ಆತನ ನಾಟಕಗಳಲ್ಲಿ ವಿಶ್ಲೇಷಿಸುತ್ತಾನೆ. ಆತನ ಬಹುತೇಕ ನಾಟಕಗಳ ಕೇಂದ್ರ ಪಾತ್ರ ಹೆಣ್ಣು. ಅವನ ಪಾತ್ರಗಳ ವಿಶೇಷತೆ ಆ ಕಾಲದಲ್ಲಿ ಗ್ರೀಕ ನಾಟಕಗಳಲ್ಲಿ ಬರುವ ಅತಿಮಾನುಷ ಶಕ್ತಿಯ ಪಾತ್ರಗಳಿಗೆ ಸ್ವಲ್ಪ ವಿಭಿನ್ನ ಎನ್ನಿಸುವ ಸಹಜ ಮಾನವ ಗುಣ ಹೊಂದಿದ ಪಾತ್ರಗಳನ್ನು ಆತ ಸೃಷ್ಟಿಸಿರುವುದು. ಆತನೊಬ್ಬ ಮಾನವ ಹೃದಯಿ ಜೊತೆಗೆ ವಾಸ್ತವವಾದಿ. ಹಾಗಾಗಿ ಕ್ರಿಸ್ತಪೂರ್ವ ೫ನೇ ಶತಮಾನದ ಆ ನಾಟಕ ಇಂದಿಗೂ ಪ್ರಸ್ತುತವೆನಿಸುತ್ತದೆ.
*****