ಒಪ್ಪೊತ್ತಿನ ಊಟದಲ್ಲಿ
ಹರಕು ಬಟ್ಟೆ ಬೆಳಕಿನಲ್ಲಿ
ಅಳುವಿನಲ್ಲಿ ನಗುತ ನಾನು
ಸೆಳವಿನಲ್ಲಿ ತೇಲುತ-
ನೆಲವ ನೆಚ್ಚಿ ಇದ್ದೆನು
ಬೆವರಿನಲ್ಲಿ ಬಾಳುತ
ಒಡಲ ಸುಖ, ಪ್ರೀತಿ ಮಾತು
ಬರುವುದೆಂದು ಕಾಯುತ.
ಮಹಲಿನಿಂದ ಕುರ್ಚಿಯಿಂದ
ಭೂಮಿಯೊಡಲ ಬಿರುಕಿನಿಂದ
ಎದ್ದವಲ್ಲೊ ಎದ್ದವು
ಉರಿಗಣ್ಣಿನ ಕೈಗಳು!
ಹರಿಹಾಯುವ ಮೈಗಳು!
ಮುಚ್ಚಿದಂಥ ಸೆರಗ ಸೆಳೆದು
ಬಡ್ಡಿ ಲೆಕ್ಕ ಹಾಕಿ ಹರಿದು
ಅಸಲಿಗೆಂದು ಆಮರಿದರು
ಎದೆಯ ಮೇಲೆ ಹುಲಿಯ ಉಗುರು.
ನೆಲಕೆ ಬಿದ್ದರಲ್ಲೆ ಒದ್ದು
ಹೊರಳು ಮೈಯ ಮೇಲೆ ಬಿದ್ದು
ಪರಪರನೆ ಹರಿದರೊ
ಮೈಯ ಮಾನದಂಗುಲ!
ಬರೆದರಯ್ಯೊ! ಬರೆದರೊ
ಮಾನಭಂಗದಕ್ಷರ.
ಹಕ್ಕಿ ರೆಕ್ಕೆ ಬಡಿಯುವಾಗ
ಹದ್ದು ಮೀರಿ ಹಲ್ಲೆಯಾಯ್ತು
ಹಸಿವು ಹಗಲು ಒಂದೇ ಆಯ್ತು
ಸೂರ್‍ಯನೆದುರು ಬೆತ್ತಲೆ
ಆದರೂನು ಕತ್ತಲೆ!
*****