“ಹೆಚ್ಚು ಕೆಲಸಮಾಡುವವನಿಗಿಂತ ಕಾಳಜಿಪೂರ್‍ವಕ ಕೆಲಸ ಮಾಡುವವನು ನನಗೆ ಅತ್ಯಂತ ಪ್ರಿಯೆನಾಗುವನು” ಎಂದು ಓರ್ವ ಬ್ರಿಟಿಶ ಮಂತ್ರಿವರ್‍ಯನು ಅಂದಿದ್ದಾನೆ. ಆಚಾರ್ಯರು ಕುದುರೆಯ ಹಿಂದೆಬಿದ್ದದ್ದನ್ನೆಲ್ಲ ತಕ್ಕೊಂಡುಬಾ ಎಂದು ಹೇಳಿದ ಮಾತ್ರದಿಂದ ಬುದ್ಧಿಗೇಡಿ ಭಗವಂತನು ಕುದುರೆಯ ಲದ್ದಿಯನ್ನು ಕೂಡ ಹಸಿಬೆಯಲ್ಲಿ ತುಂಬಿತಂದಂತೆ, ಕಾರ್‍ಯಗಳ ಮಹತ್ವವನ್ನು ತಿಳಿಯದೆ ಕೆಲಸ ಮಾಡುವವರು ಬಹಳ. ಕಾರ್‍ಯದ ಮಹತ್ವ ತಿಳಿಯುವದಕ್ಕೆ ಮನಸ್ಸಿನಲ್ಲಿ ಆಸ್ಥೆ-ಕಾಳಜಿ ವಹಿಸಬೇಕಾಗುವದು. ಆಸ್ಥೆಯು ಬೆಳೆ ಬೆಳೆದಂತೆ ಪ್ರಯತ್ನಗಳು ಎಂದೂ ನಿರರ್‍ಥಕವಾಗುವದಿಲ್ಲ.
ಹಿಂದಕ್ಕೆ ಆಗಿ ಹೋದ ಮಂತ್ರಿವರ್‍ಯ ಯೋಗಂಧರಾಯಣ, ಅಮಾತ್ಯರಾಕ್ಷಸ ಮೊದಲಾದವರು ಅತ್ಯಂತ ಆಸ್ಥೆಯಿಂದ ಕೆಲಸಮಾಡುತ್ತಿದ್ದದರಿಂದಲೇ ಅವರು ಸುಪ್ರಸಿದ್ಧ ಪ್ರಧಾನರಾಗಿದ್ದರು. ಮೈಸೂರ ಮಾಜಿ ದಿವಾಣರಾದ ಸರ ಶೇಷಾದ್ರಿ ಅಯ್ಯನವರು ಒಳ್ಳೇ ಆಸ್ಥೆಯಿಂದ ಕಾರ್ಯಭಾರವನ್ನು ಸಾಗಿಸಿದ್ದರಿಂದಲೇ ಅಂಥ ಕಠಿಣ ಪ್ರಸಂಗದಲ್ಲಿ ಕೂಡಾ ಮೈಸೂರ ರಾಜ್ಯವು ಪ್ರಗತಿಯನ್ನು ಹೊಂದಿತು. ನಮ್ಮ ವಿಷಯಕ್ಕೇ ನಮ್ಮಲ್ಲಿ ಆಸ್ಥೆಯಿಲ್ಲದಿರಲು ಮಂದಿಯ ಬಗ್ಗೆ ನಾವು ಆಸ್ಥೆ ಪಡುವ ಬಗೆಯಾದರೂ ಹೇಗೆ?
“ತನ್ನಂತೆ ಪರರಬಗೆದೊಡೆ ಕೈಲಾಸಬಿನ್ನಣವಳ್ಳ್ಳು” ಎಂಬ ಸರ್ವಜ್ಞ ಕವಿಯ ಉಕ್ತಿಯು ಮನನೀಯವಾಗಿದೆ. ಖರೇ ಆಸ್ಥೆಯಿಂದಾಗಲಿ, ತೋರಿಕೆಯ ಡಂಭಾಚಾರದ ಆಸ್ಥೆಯಿಂದಾಗಲಿ ನಾವು ನಮ್ಮ ಕೆಲಸಗಳನು ಹೇಗಾದರೂ ಸಾಗಿಸಿಕೊಳ್ಳುತ್ತಿರುವೆವು. ಆದರೆ ಪರರ ಕೆಲಸದಲ್ಲಿ ನಮ್ಮ ಆ ಡಂಭಾಚಾರದ ಆಸ್ಥೆಯನ್ನು ಕೂಡ ಉಪಯೋಗಿಸ ಹೋಗದೆ, “ಹತ್ತಿದಲ್ಲಿ ಹತ್ತಿತು ಹಾರಿದಲ್ಲಿ ಹಾರಿತು” ಎನ್ನುವಂತೆ ದುರ್ಲಕ್ಷ್ಯಮಾಡುವೆವು. ಇದರಿಂದ ಕಾರ್ಯಕೆಟ್ಟು ಹಾನಿಯೊಗುವ ಮಾನಕ್ಕಿಂತ, ನಮ್ಮ ವೃತ್ತಿಯು ಕೆಟ್ಟು ಪ್ರಗತಿಹೀನವಾಗುವ ಮಾನವು ಹೆಚ್ಚಾಗುವದು. ಆದ್ದರಿಂದ ಪ್ರಗತಿಪರನು ಪ್ರಗತಿಹೊಂದುವದಕ್ಕಾಗಿ ಮಾಡಬೇಕಾದ ಕೆಲಸವನ್ನು ಒಳ್ಳೇ ಆಸ್ಥೆಯಿಂದ ಮಾಡಿ ಪ್ರಗತಿಹೊಂದಬೇಕು.
*****
ಮುಂದುವರೆಯುವುದು