ಓಡುತಿರುವ ಗಾಡಿಯೊಳಗೆ
ಇರುಳು ಹೆಪ್ಪುಗಟ್ಟುತಿದೆ
ಒಳದೀಪಗಳನುರಿಸಿದರೆ
ಹೊರಜಗವೇ ಮಾಯ
ಕಿಟಕಿಗಾಜುಗಳ ಗೋಡೆಯಾಗಿ
ಎಲ್ಲಿ ನೋಡಿದರೂ ಅಲ್ಲಿ
ನೋಡಿದವನ ಮುಖವೆ ತೋರುವುದು
ಲೋಕ ಮುಚ್ಚಿಕೊಳ್ಳುವುದು
ಅಲ್ಲಿ ಹೊರಗೆ ಮಿನುಗುವ
ಸಣ್ಣ ಮಿಂಚು ಹುಳಗಳೋ
ಅಲ್ಲಿ ಮೇಲೆ ಆಕಾಶದಲ್ಲಿ
ಹೊಳೆಯುವ ತಾರಾಗಣಗಳೋ
ಮೋಡಗಳ ಹಿಂದೆ ಥಳಕ ಕಂಡು
ಅರ್‍ಧ ಚಂದ್ರನ ಇನ್ನರ್‍ಧ ನೋಡಿ
ಕ್ಷಣಕಾಲದ ಉಲ್ಕಾಪಾತ
ಯಾವುದೊ ಗವಾಕ್ಷಿಯ ನಂದಾದೀಪ
ಅಲ್ಲಿ ನಿಂತ ಬೆಳಕುಗಳೋ
ಎದ್ದು ಕುಳಿತ ಮನುಷ್ಯರೋ
ಪುರಾತನದ ಶಿಲೆಗಳೋ
ತಪಸ್ಸಿಗೆಂದು ನಿಂತಂಥ ಏಕಾಂಗಿ ತಾಳೆಗಳೋ
ಅದರಾಚೆಗೆ ಹೊಲಗಳೋ
ಯಾರೊ ಬೆಳೆದ ಭತ್ತ ಜೋಳ ಬೆಳೆಗಳೋ
ಹೊಳೆಗಳೋ ಕಾಲುವೆಗಳೋ
ಯಾರೂ ಬೆಳೆಯದ ಗಿಡಗಳೊ
*****